ನಿಮ್ಮನ್ನು ನೀವು ನಗೆಪಾಟಲಿಗೀಡು ಮಾಡಿಕೊಳ್ಳಬೇಡಿ – ಪಿಸಿಬಿಗೆ ಮಾಜಿ ಕ್ರಿಕೆಟಿಗ ಸಲಹೆ

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಆಟಗಾರರು ತಮ್ಮ ನಿಜವಾದ ವಯಸ್ಸನ್ನು ಬಹಿರಂಗ ಪಡಿಸಬೇಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ಪಾಕ್ ಕ್ರಿಕೆಟ್ ಬೋರ್ಡಿಗೆ ಸಲಹೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ಆಟಗಾರ ನಸೀಮ್ ಶಾ ಅಂತರ್ ರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ನಸೀಮ್ ಶಾಗೆ ಕೇವಲ 16 ವರ್ಷ ವಯಸ್ಸು ಎಂದು ಪಿಸಿಬಿ ಅಧಿಕೃತವಾಗಿ ಹೇಳಿತ್ತು. ಸದ್ಯ ಈತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾನೆ. ಈ ಕುರಿತು ವ್ಯಂಗ್ಯವಾಡಿರುವ ಪಾಕ್ ಮಾಜಿ ನಾಯಕ ರಶೀದ್ ಲತೀಫ್ ಪಿಸಿಬಿಗೆ ಸಲಹೆ ನೀಡಿ, ನಿಮ್ಮನ್ನು ನೀವು ನಗೆಪಾಟಲಿಗೀಡು ಮಾಡಿಕೊಳ್ಳಬೇಡಿ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಲತೀಫ್, ಪಾಕ್ ಆಟಗಾರರು ಅಂಡರ್-19 ತಂಡದಲ್ಲಿ ಆಡುತ್ತಾರೆ. ಅಂಡರ್-19 ಆಡುವವರು ಅಂಡರ್-16 ತಂಡದ ಪರ ಆಡುತ್ತಾರೆ. ಅಂಡರ್-16 ಹುಡುಗರು ಅಂಡರ್-13ರಲ್ಲಿ ಇರುತ್ತಾರೆ. ಅಂಡರ್-13 ಆಡುವ ಮಕ್ಕಳು ತಾಯಿಯ ಮಡಿಲಲ್ಲೇ ಇರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ ಇದು ಇದೆಲ್ಲವೂ ಒಂದು ಪ್ರಹಸನವಾಗಿ ಬದಲಾಗಿದ್ದು, ನಿಮ್ಮನ್ನು ನೀವು ನಗೆಪಾಟಲೀಗಿಡು ಮಾಡಿಕೊಳ್ಳಬೇಡಿ. ಪಿಸಿಬಿ ಇದರ ಮೇಲೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಈ ಹಿಂದೆಯೂ ಪಾಕ್ ಕ್ರಿಕೆಟ್ ಆಟಗಾರರು ತಮ್ಮ ವಯಸ್ಸಿನ ತಪ್ಪು ಮಾಹಿತಿ ನೀಡಿಯೇ ಹಲವು ಬಾರಿ ಚರ್ಚೆಗೆ ಕಾರಣರಾಗಿದ್ದು, ಪಾಕ್ ಮಾಜಿ ಆಟಗಾರ ಅಫ್ರಿದಿ ವಯಸ್ಸಿನ ಬಗ್ಗೆಯೂ ಸುಳ್ಳು ಹೇಳಿದ್ದರು. 1996ರಲ್ಲಿ 36 ಎಸೆತಗಳಲ್ಲಿ ಶತಕ ಸಿಡಿಸಿದ್ದ ಆಫ್ರಿದಿಗೆ ಕೇವಲ 16 ವರ್ಷ ಎನ್ನಲಾಗಿತ್ತು. ವೃತ್ತಿ ಜೀವನದೂದ್ದಕ್ಕೂ ಈ ಕುರಿತು ಚರ್ಚೆಯಾದರೂ ಅಫ್ರಿದಿ ಮಾತ್ರ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಆದರೆ ನಿವೃತ್ತಿಯ ಬಳಿಕ ಈ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ್ದ ಅಫ್ರಿದಿ, ಆ ವೇಳಗೆ ತಮಗೆ 21 ವರ್ಷ ವಯಸ್ಸಾಗಿತ್ತು ಎಂದಿದ್ದರು. ಸದ್ಯ ನಸೀಮ್ ಶಾನನ್ನು ಅಂಡರ್-19 ತಂಡಕ್ಕೆ ಆಯ್ಕೆ ಮಾಡಿರುವ ಬಗ್ಗೆ ಪಾಕ್‍ನ ಹಲವು ಮಾಜಿ ಕ್ರಿಕೆಟ್ ಆಟಗಾರರು ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *