ಮುಂಬೈ ಮಾಜಿ ಪೊಲೀಸ್ ಆಯುಕ್ತ ನಾಪತ್ತೆ, ರಷ್ಯಾಗೆ ಪರಾರಿ?

ಮುಂಬೈ: ಮುಂಬೈ ನಗರದ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ನಾಪತ್ತೆಯಾಗಿದ್ದು ರಷ್ಯಾಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಪರಮ್ ಬೀರ್ ಸಿಂಗ್ ಎಲ್ಲಿದ್ದಾರೆ ಎನ್ನುವುದು ನಿಗೂಢವಾಗಿದೆ.

ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಪರಮ್ ಬೀರ್ ಸಿಂಗ್ ಎಲ್ಲಿದ್ದಾರೆ ಎನ್ನುವುದು ರಾಜ್ಯ ಸರ್ಕಾರ ಅಥವಾ ತನಿಖಾ ಸಂಸ್ಥೆಗಳಿಗೆ ತಿಳಿದಿಲ್ಲ. ಹಲವು ಬಾರಿ ನೋಟಿಸ್ ನೀಡಿದರೂ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು 

ಕೇಂದ್ರ ಗೃಹ ಸಚಿವಾಲಯದ ಜೊತೆ ಅವರನ್ನು ಹುಡುಕುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರಿ ಅಧಿಕಾರಿಯಾಗಿ, ಅವರು ಸರ್ಕಾರದ ಅನುಮತಿಯಿಲ್ಲದೆ ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ ಎಂದರು.

ಮಹಾರಾಷ್ಟ್ರದ ಗೃಹ ಸಚಿವರಾದ ಅನಿಲ್ ದೇಶ್ ಮುಖ್ ಪ್ರತಿ ತಿಂಗಳು 100 ಕೋಟಿ ರು. ಹಫ್ತಾ ಕೇಳುತ್ತಾರೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪರಮ್ ಬೀರ್ ಸಿಂಗ್ ದೂರು ನೀಡಿದ್ದರು. ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬ್ ಇಟ್ಟ ಸಚಿನ್ ವಾಜೆ ಅವರನ್ನು ಬಳಸಿಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಫೆಬ್ರವರಿ ಮಧ್ಯಭಾಗದಲ್ಲಿ ಅಂದರೆ ಫೆಬ್ರವರಿ 6ರಿಂದ 16ರ ಮಧ್ಯೆ ಅನಿಲ್ ದೇಶ್‍ಮುಖ್ ಅವರು ಕೆಲವು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಪರಮ್ ಬೀರ್ ಸಿಂಗ್ ಪತ್ರದಲ್ಲಿ ದೂರಿದ್ದರು.

ಈ ಪತ್ರ ಬೆಳಕಿಗೆ ಬಂದ ಬೆನ್ನಲ್ಲೇ ಬಿಜೆಪಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಭಾರೀ ಟೀಕೆ ಮಾಡತೊಡಗಿತು. ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್ ದಾಖಲೆಗಳ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಟೀಕೆ ಜಾಸ್ತಿ ಆಗುತ್ತಿದ್ದಂತೆ ಅನಿಲ್ ದೇಶ್ ಮುಖ್ ರಾಜೀನಾಮೆ ಮಂತ್ರಿ ಸ್ಥಾನಕ್ಕೆ ನೀಡಿದ್ದರು. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು ಪರಮ್ ಬೀರ್ ಪ್ರಮುಖ ಸಾಕ್ಷಿಯಾಗಿದ್ದಾರೆ.

ಮುಂಬೈ ಪೊಲೀಸರು ಪರಮ್ ಬಿರ್ ಸಿಂಗ್ ವಿರುದ್ಧ ಜೂನ್ ತಿಂಗಳಿನಲ್ಲಿ 4 ಎಫ್‍ಐಆರ್ ದಾಖಲಿಸಿದ್ದಾರೆ. ಬಿಲ್ಡರ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸುಲಿಗೆ, ವಂಚನೆ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಅಡಿ ಎಫ್‍ಐಆರ್ ದಾಖಲಾಗಿದೆ.

Comments

Leave a Reply

Your email address will not be published. Required fields are marked *