ಮಕ್ಕಳು, ಮೊಮ್ಮಕ್ಕಳಿಂದಲೇ ದೇವೇಗೌಡರು ಸೋತರು: ಸಿ.ಎಸ್.ಪುಟ್ಟೇಗೌಡ

ಹಾಸನ: ಬಡವರ ಮಕ್ಕಳು ಕೆಂಪುಕೋಟೆಗೇರಿಸಿದ್ದ ನಿಮ್ಮನ್ನು ಮತ್ತೆ ಸಂಸದನಾಗದ ಹಾಗೆ ಮಾಡಿದ್ದು ನಿಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೂ ಸೊಸೆಯಂದಿರು. ನಿಮ್ಮ ತಾಳ್ಮೆ ಅವರಿಗಿಲ್ಲ, ಅವರ ಮಾತನ್ನು ಕೇಳಿ ನಿರ್ಧಾರ ಕೈಗೊಳ್ಳಬೇಡಿ ಎಂದು ಎಚ್.ಡಿ.ದೇವೇಗೌಡರಿಗೆ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಸಲಹೆ ನೀಡಿದ್ದಾರೆ.

ಜಿಲ್ಲೆಯ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಮಾಡಿದ 2000ನೇ ಇಸವಿಯ ಹಿಂದಿನ ರಾಜಕೀಯ ಈಗಿಲ್ಲ. ವಿನಾಕಾರಣ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಬೆರಳು ಮಾಡಿ ತೋರಿಸಬೇಡಿ. ಕುಟುಂಬ ರಾಜಕಾರಣದಿಂದಲೇ ನೀವು ಎಂಪಿ ಆಗಲಿಲ್ಲ, ನಿಮ್ಮ ಕುಡಿಯೇ ನಿಮ್ಮನ್ನು ಸಂಸದನಾಗಲು ಬಿಡಲಿಲ್ಲ. ಕುಟುಂಬ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ಲಾಲೂ ಪ್ರಸಾದ್ ಆದಿಯಾಗಿ ಈವರೆಗೆ ಕುಟುಂಬ ರಾಜಕಾರಣ ಮಾಡಿದವರೆಲ್ಲ ಮಣ್ಣು ಮುಕ್ಕಿದ್ದಾರೆ. ಹೀಗಾಗಿ ಪ್ರಜಾಪ್ರಭುತ್ವಕ್ಕೆ ಬೆಲೆ ನೀಡಿ ಕುಟುಂಬ ರಾಜಕಾರಣವನ್ನು ಮಾಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲರೂ ಸಾಲಮನ್ನಾ ಮಾಡಿದ್ದೇವೆ ಎಂದು ಸಾರುತ್ತಿದ್ದೀರಿ, ಯಾರಿಗೆ ನೀವು ಸಾಲಮನ್ನಾ ಮಾಡಿರುವುದು, ಸಾಲಮನ್ನಾ ಆಗಿರುವುದು ಬಡವರಿಗಲ್ಲ. ಸೊಸೈಟಿ ಕಾರ್ಯದರ್ಶಿ, ನಿರ್ದೇಶಕರಿಗೆ ಸಾಲಮನ್ನಾ ಆಗಿದೆ. ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ನಡೆಯುತ್ತಿರುವುದು ಕೇವಲ 8 ಕೋಟಿ ರೂ.ಗಳಿಗಾಗಿ. ಆದರೆ ಸೊಸೈಟಿಯಲ್ಲಿ 800 ಕೋಟಿ ರೂ. ದರೋಡೆ ಮಾಡಿದ್ದಾರೆ. ನಮ್ಮ ನಾಯಕರು ಏನೂ ಮಾತನಾಡಬೇಡಿ ಸುಮ್ಮನಿರಿ ಎಂದಿದ್ದರು. ಹೀಗಾಗಿ ಸುಮ್ಮನಿದ್ದೆ. ಈಗ ಮೈತ್ರಿ ಸರ್ಕಾರ ಬಿದ್ದು, ಹೋಗಿದೆ ನಾವು ಬೇರೆಯಾಗಿದ್ದೇವೆ, ಮಾತನಾಡುವ ಸಂದರ್ಭ ಬಂದಿದೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಿಮ್ಮ ಪಕ್ಷದ ಜಾತಕವನ್ನು ಗುಬ್ಬಿ ಶ್ರೀನಿವಾಸ, ಜಿಟಿ ದೇವೇಗೌಡ ಬಿಚ್ಚಿಡುತ್ತಿದ್ದಾರೆ. ದೇವೇಗೌಡರು ಈಗಲಾದರೂ ಮನವರಿಕೆ ಮಾಡಿಕೊಳ್ಳಬೇಕು. ಕುಟುಂಬ ರಾಜಕಾರಣ ಒಳ್ಳೆಯದಲ್ಲ. ಎಲ್ಲದರಲ್ಲೂ ಕುಟುಂಬದವರನ್ನು ಸೇರಿಸುವುದನ್ನು ಬಿಡಿ. ಡೈರಿ, ಶುಗರ್ ಫ್ಯಾಕ್ಟರಿ, ಜಿ.ಪಂ ಸೇರಿದಂತೆ ಎಲ್ಲ ಕಡೆಯೂ ಅವರ ಕುಟುಂಬದವರೇ ಇದ್ದಾರೆ. ನಿಮಗಿದ್ದ ಸಹನಾ ಶಕ್ತಿ ನಿಮ್ಮ ಮಕ್ಕಳಿಗಿಲ್ಲ. ಡಿ.ಕೆ.ಶಿವಕುಮಾರ್ ನಿಮಗಾಗಿ ಅಷ್ಟು ಹೊಡೆದಾಡಿದರೂ ಕುಮಾರಸ್ವಾಮಿ ಅವರು ಹೋರಾಟಕ್ಕೆ ಬರಲಿಲ್ಲ. ಇನ್ನಾದರೂ ನಿಮ್ಮ ಕುಟುಂಬ ರಾಜಕಾರಣ ಪರಿಶೀಲನೆ ಮಾಡಿಕೊಳ್ಳಿ ಎಂದು ಹರಿಹಾಯ್ದಿದ್ದಾರೆ.

Comments

Leave a Reply

Your email address will not be published. Required fields are marked *