ಅವರು ಏನೇನು ಮಾಡ್ತಾರೋ ಮಾಡಲಿ ನೋಡೋಣ: ಜೆಡಿಎಸ್ ವರಿಷ್ಠರ ವಿರುದ್ಧ ಚಲುವರಾಯಸ್ವಾಮಿ ಕಿಡಿ

ಮಂಡ್ಯ: ಜಿಲ್ಲೆಯ ವಿಷಯ ಬಂದಾಗ ದ್ವೇಷದ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ. ಅವರು ಏನೇನು ಮಾಡುತ್ತಾರೋ ಮಾಡಲಿ ನೋಡೋಣ ಎಂದು ಜೆಡಿಎಸ್ ವರಿಷ್ಠರ ವಿರುದ್ಧ ಮಾಜಿ ಶಾಸಕ ಚಲುವರಾಯಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನಾಗಮಂಗಲ ತಾಲೂಕಿನ, ಬೆಳ್ಳೂರು ಪಟ್ಟಣ ಪಂಚಾಯತ್ ಒಟ್ಟು 13 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ ಪಕ್ಷದ ಏಳು ಸದಸ್ಯರು ಗೆಲುವು ಸಾಧಿಸಿದ್ದಾರೆ. ಆದರೆ ಬೆಳ್ಳೂರು ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನ ಎಸ್‍ಟಿಗೆ ಮೀಸಲಾಗಿದೆ. ಪಕ್ಷೇತರಾಗಿ ಸ್ಪರ್ಧಿಸಿ ಗೆಲುವು ಸ್ಪರ್ಧಿಸಿರುವ ರಾಮಲಿಂಗಯ್ಯ ಮಾತ್ರ ಎಸ್‍ಟಿ ಪಂಗಡಕ್ಕೆ ಸೇರಿದವರಾಗಿದ್ದು, ಬಹುಮತ ಪಡೆದ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ ಸ್ಥಾನದಿಂದ ವಂಚಿತರಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ರಾಮಲಿಂಗಯ್ಯ ಜೆಡಿಎಸ್ ಶಾಸಕ ಸುರೇಶ್‍ಗೌಡ ಬೆಂಬಲಿಗರಾಗಿದ್ದು ಪರೋಕ್ಷವಾಗಿ ಜೆಡಿಎಸ್ ಅಧಿಕಾರ ಹಿಡಿದಂತಾಗುತ್ತಿದೆ ಎಂದರು.

ತಮ್ಮ ಸ್ವಕ್ಷೇತ್ರ ನಾಗಮಂಗಲದಲ್ಲಿ ತಮ್ಮ ಬೆಂಬಲಿಗರಿಗೆ ಆಗುತ್ತಿರುವ ಅನ್ಯಾಯದಿಂದ ಬೇಸರಗೊಂಡ ಅವರು ಜಿಲ್ಲೆಯ ವಿಷಯ ಬಂದಾಗ ದ್ವೇಷದ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ. ಇದೇನು ನಮಗೆ ಹೊಸದಲ್ಲ. ಪರಿಸ್ಥಿತಿ ಗೊತ್ತಿರುವುದರಿಂದ ನಾವೇನು ಮಾಡುವಂತಿಲ್ಲ. ಅವರು ಏನೇನು ಮಾಡ್ತಾರೋ ಮಾಡಲಿ ನೋಡೋಣ ಎಂದು ಕಿಡಿಕಾರಿದ್ದಾರೆ.

ಜೆಡಿಎಸ್‍ನವರು ನಾಲ್ಕು ಜನ ಗೆದ್ದಿದ್ದಾಗ ಎಸ್‍ಟಿ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಮಾಡಿಸಿಕೊಂಡು ಬರುತ್ತಾರೆ ಅಂದರೆ ಅದರಲ್ಲಿ ರಹಸ್ಯ ಏನಿಲ್ಲ. ಇದನ್ನೆಲ್ಲ ಜನ ನೋಡಲಿ. ನಾವು ಅವರಿಗೆ ಏನು ಕೇಳಲು ಹೋಗಲ್ಲ. ಬೇಡಿಕೆಯನ್ನೂ ಸಲ್ಲಿಸುವುದಿಲ್ಲ. ಜಿಲ್ಲೆ ವಿಚಾರ ಬಂದಾಗ ಜನತಾದಳ ಸರ್ಕಾರ, ಮಂತ್ರಿಗಳು, ಶಾಸಕರು ಏನು ಬೇಕಾದರು ತೀರ್ಮಾನ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಈಗ ಆಗಿರುವ ಬೆಳವಣಿಗೆ ಬಗ್ಗೆ ನಾನು ಯಾರ ಗಮನಕ್ಕೂ ತರುವುದಿಲ್ಲ. ಸ್ವತಂತ್ರ ಅಭ್ಯರ್ಥಿ ರಾಮಲಿಂಗಯ್ಯ ಕೂಡ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *