ಬಿಎಸ್‍ವೈ, ಬಿಜೆಪಿ, ಆರ್ ಎಸ್‍ಎಸ್ ಬೈದವ್ರಿಗೆ ಟಿಕೆಟ್ – ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ

ಬೆಂಗಳೂರು: ಯಾರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಹೋದರಿ ಶೋಭಕ್ಕ ಅವರಿಗೆ ಸಂಬಂಧ ಕಲ್ಪಿಸಿ ಹೀನಾಮಾನವಾಗಿ ಬೈದಿದ್ದಾರೋ ಅವರಿಗೆ ಸೀಟು ನೀಡುತ್ತಿದ್ದಾರೆ ಅಂತ ಮಾಜಿ ಸಚಿವ ಹರತಾಳು ಹಾಲಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಬಸವೇಶ್ವರನಗರದ ತಮ್ಮ ನಿವಾಸದಲ್ಲಿ ಇಂದು ಕುಟುಂಬ ಸಮೇತರಾಗಿ ಸಂಕಷ್ಟಹರ ಪೂಜೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾ ನನ್ನ ಸಹೋದರಿ ಸಮಾನರಾದ್ರೆ, ಭಾರತಿ ಶೆಟ್ಟಿ ನನ್ನ ತಾಯಿ ಸಮಾನರಾಗಿದ್ದಾರೆ. ಇವರಿಬ್ಬರಿಗೂ ನಮ್ಮ ನಾಯಕರಿಗೂ ಸಂಬಂಧ ಕಲ್ಪಿಸಿದ್ದಾರೆ. ಆದ್ರೆ ಇದೀಗ ಸಂಬಂಧ ಕಲ್ಪಿಸಿದವರಿಗೂ ಟಿಕೆಟ್ ಕೊಡ್ತಾರೆ ಅನ್ನೋ ಮಾಹಿತಿ ಸಿಕ್ಕಿದೆ. ಇನ್ನು ಈಶ್ವರಪ್ಪ ಅವರ ಮುಖ ನೋಡಿದ್ರೆ ಮೂರು ಓಟು ಬರೋದಿಲ್ಲ. ಆರ್‍ಎಸ್‍ಎಸ್ ನವರು 200 ಕೋಟಿ ತಂದ್ರು ಎಂದ ಗೋಪಾಲಕೃಷ್ಣ ಅವರಿಗೆ ಸೀಟು ಕೊಡ್ತಾರಂತಾದ್ರೆ ಇದಕ್ಕೆ ನಾನು ಏನ್ ಹೇಳ್ಬೇಕು. ಇದರಿಂದ ಸಹಜವಾಗಿಯೇ ನನಗೆ ಬೇಸರ ಆಗಿದೆ ಅಂತ ಹೇಳಿದ್ರು.

ನನಗೆ ಸೀಟು ಸಿಗಬಹುದೆಂಬ ನಂಬಿಕೆ ಇದೆ. ಅದು ನಿಜವಾಗುತ್ತೋ ಇಲ್ಲವೋ ಗೊತ್ತಿಲ್ಲ. ವೆಂಕಯ್ಯ ನಾಯ್ಡು ಅವರಿಗೆ ಬೈದೋರಿಗೂ ಟಿಕೆಟ್ ನೀಡ್ತಿದ್ದಾರೆ. ಆಯನೂರ್ ಮಂಜಣ್ಣ ಬೂಟ್ ನೆಕ್ಕೋನು, ಬಸ್ ಸ್ಟ್ಯಾಂಡ್ ರಾಘು ಅಂತ ಬೈದಿದ್ರು. ವಿಕಾಸ್ ಸೌಧ ವಿಜಯೇಂದ್ರರಿಗೆ, ವಿಧಾನಸೌಧ ರಾಘವೇಂದ್ರ ಅವರಿಗೆ ಬರೆದು ಕೊಡ್ತಾರೆ ಅಂತ ಒಬ್ರು ಹೇಳಿದ್ರು. ಅವರಿಗೂ ಟಿಕೆಟ್ ನೀಡ್ತಿದ್ದಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದರು.

ಇರ್ಲಿ ಬಿಡಿ ಇನ್ನೇನು ಜೀವನ. ನನ್ನಂತೋರು ಸತ್ತ ದಿನ ಮಾಜಿ ಸಚಿವ ಹಾಲಪ್ಪ ನಿಧನ ಅಂತ ಬರೀತೀರಿ. ಅದನ್ನಂತೂ ತಪ್ಪಿಸಲು ಸಾಧ್ಯವಿಲ್ಲ ಅಲ್ವ. ಏನೇ ಆಗಲಿ ನಾವಿನ್ನು ಸುಮ್ಮನಿರುವ ಪ್ರಶ್ನೆಯಿಲ್ಲ. ನಾವು ಸುಮ್ನಿರುತ್ತೇವೆ ಅಂದಿದ್ದೀಕೆ ಹಿಂಗೆ ಮಾಡಿದ್ರು ಅಂತ ಅವರು ಟಾಂಗ್ ನೀಡಿದ್ರು.

Comments

Leave a Reply

Your email address will not be published. Required fields are marked *