ಕೊಡಗಿನ ಹಾಕಿ ಆಟಗಾರನನ್ನು 7 ಬಾರಿ ಚಾಕುವಿನಿಂದ ಇರಿದು ಕೊಲೆಗೈದ 2ನೇ ಪತ್ನಿ!

ಮುಂಬೈ: ಕೊಡಗು ಮೂಲದ ಮಾಜಿ ಹಾಕಿ ಆಟಗಾರ ಅಪೈಯ್ಯ ಚೆನಂದ ಅವರ ಪತ್ನಿಯಿಂದಲೇ ಕೊಲೆಗೀಡಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಕುಟುಂಬ ಕಲಹದಿಂದಾಗಿ 45 ವರ್ಷದ ಪತ್ನಿ ಅಮಿತಾ ಏಳು ಬಾರಿ ಚಾಕುವಿನಿಂದ ಇರಿದು 52 ವರ್ಷದ ಅಪೈಯ್ಯ ಅವರನ್ನು ಕೊಲೆಮಾಡಿದ್ದಾರೆ. ನಂತರ ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪೈಯ್ಯ ಮಲಾಡದ ಕಚ್‍ಪಡ ಪ್ರದೇಶದ ಪ್ಲುಶ್ ಸೊಸೈಟಿಯ 27ನೇ ಮಹಡಿಯಲ್ಲಿ ತನ್ನ 23 ವರ್ಷದ ಮಗ ಗಣಪತಿ, 15 ವರ್ಷದ ಮಗಳು ಮತ್ತು ಪತ್ನಿಯೊಂದಿಗೆ ನೆಲೆಸಿದ್ದರು.

ಪಾರ್ಟಿ ಮಾಡುತ್ತಿದ್ದರು:
ಶನಿವಾರ ಮಧ್ಯಾಹ್ನ ಮಕ್ಕಳು ಹೊರಗೆ ಹೋಗಿದ್ದಾಗ, ಮನೆಯಲ್ಲಿ ಅಪೈಯ್ಯ ತನ್ನ ಪತ್ನಿಯೊಂದಿಗೆ ಮದ್ಯಪಾನ ಸೇವಿಸುತ್ತಾ ಕಾಲಕಳೆದಿದ್ದಾರೆ. ಆ ವೇಳೆಯಲ್ಲಿ ಯಾವುದೋ ವಿಷಯಕ್ಕೆ ದಂಪತಿಗಳಿಬ್ಬರು ವಾದಕ್ಕಿಳಿದಿದ್ದಾರೆ. ಇದು ವಿಕೋಪಕ್ಕೆ ಹೋಗಿ ಕೋಪಗೊಂಡ ಅಮಿತಾ ಅಡುಗೆ ಮನೆಗೆ ತೆರಳಿ, ಚಾಕು ತಂದು ಗಂಡನಿಗೆ ಏಳು ಬಾರಿ ಇರಿದು ಕೊಲೆಮಾಡಿ ನಂತರ ತಾನು ಇರಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಅಪೈಯ್ಯ ಮಗ ಗಣಪತಿ ಮಲಾಡ್ ಪೊಲೀಸ್ ಸ್ಟೇಷನ್‍ಗೆ ಹೋಗಿ ತಾಯಿ ಅಮಿತಾ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅಪೈಯ್ಯರ ಮಗ ಹಾಗೂ ಮಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅಮಿತಾ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ ಮೇಲೆ ಅವರನ್ನು ಬಂಧಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಅಮಿತಾ 2ನೇ ಪತ್ನಿ:
ಅಮಿತಾ ಅವರು ಅಪೈಯ್ಯ ಎರಡನೇ ಪತ್ನಿಯಾಗಿದ್ದು, ಮಗ ಗಣಪತಿ ಅಪ್ಪಯ್ಯರ ಮೊದಲ ಪತ್ನಿಯ ಮಗನಾಗಿದ್ದಾರೆ. ಈ ವಿಚಾರಕ್ಕೆ ದಂಪತಿಗಳು ಆಗಾಗ ಜಗಳವಾಡುತ್ತಿದ್ದರು. ಮುಂಗೋಪಿಯಾಗಿದ್ದ ಅಮಿತಾ ಅವರ ದುಡುಕಿನಿಂದಲೇ ಕೊಲೆ ಮಾಡಿದ್ದಾರೆ ಎಂದು ನೆರೆಹೊರೆಯವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಪೈಯ್ಯ ಚೆನಂದ್ ಏರ್ ಇಂಡಿಯಾ ಪರ ಆಟವಾಡಿದ್ದಾರೆ. ಟಾಟಾ ಮತ್ತು ಬಾಂಬೆ ಹಾಕಿ ತಂಡಗಳಲ್ಲಿ ಹಲವಾರು ಬಾರಿ ಭಾಗವಹಿಸಿದ್ದಾರೆ. ಭಾರತದ ಹಾಕಿ ತಂಡದ ಮಾಜಿ ಕೋಚ್ ಮತ್ತು ಅಪ್ಪಯ್ಯ ಜೊತೆ ಸ್ಪರ್ಧಿಸಿದ್ದ ಕ್ಲಾರೆನ್ಸ್ ಲೊಬೊ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಘಟನೆಯಿಂದ ನನಗೆ ಶಾಕ್ ಆಗಿದೆ. ಅವರು ಶಕ್ತಿಯುತ ಆಟಗಾರರಾಗಿದ್ದು ಮೈದಾನದಲ್ಲಿ ಆಕರ್ಷಕ ಪ್ರದರ್ಶನ ತೋರುತ್ತಿದ್ದರು ಎಂದು ನೆನಪು ಮಾಡಿಕೊಂಡರು.

Comments

Leave a Reply

Your email address will not be published. Required fields are marked *