ಪಾರ್ಟಿಗೆ ಮತ್ತೆ ಸೆರ್ಕೊಂಡ್ಯ? ಯಾವಾಗ ಸೇರ್ಕೊಂಡೆ? ಇಂಡಿಪೆಂಡೆಂಟ್ ಆಗಿ ಗೆದ್ದ ಬಾ ನಿನ್ನ ತಾಕತ್ ನೋಡ್ತಿನಿ: ಸಿದ್ದರಾಮಯ್ಯ ಕ್ಲಾಸ್

ಬೆಂಗಳೂರು: ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತು ಮತ್ತೆ ಪಕ್ಷ ಸೇರಿರುವ ಹಾಸನದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ವಿನಯ್ ಗಾಂಧಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇಂದು ಮಾಜಿ ಸಿಎಂ ದೇವರಾಜ ಅರಸು 103 ನೇ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮ ಆಗಮಿಸಿದ್ದ ಸಿದ್ದರಾಮಯ್ಯನವರು ವಿನಯ್ ಗಾಂಧಿ ಅವರನ್ನು ನೋಡುತ್ತಲೇ, ಪಾರ್ಟಿಗೆ ಮತ್ತೆ ಸೇರಿದಿಯಾ? ಯಾವಾಗ ಸೇರ್ಕೊಂಡೆ? ನಾನ್ಯಾವಾಗ ನಿನ್ನನ್ನು ಸೇರಿಸಿಕೊಂಡಿದ್ದೇನೆ. ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಬಾ ಆವಾಗ ನಿನ್ನ ತಾಕತ್ ನೋಡುತ್ತೀನಿ. ಮುಂದೆ ಮತ್ತೆ ಗಲಾಟೆ ಮಾಡಿದ್ರೆ ಪಕ್ಷ ಬಿಟ್ಟು ಓಡಿಸ್ತೀನಿ ಎಂದು ಎಲ್ಲರೆದುರೇ ಖಡಕ್ ಎಚ್ಚರಿಕೆಯನ್ನು ನೀಡಿದರು.

ದೇವರಾಜ ಅರಸು ಅವರು ಸರ್ವರಿಗೂ ಸಮಪಾಲು, ಸಮಬಾಳು ಕಲ್ಪನೆಯನ್ನು ಜಾರಿಗೆ ತಂದಂತಹ ನಾಯಕ. ಶಿಕ್ಷಣ ಮತ್ತು ರಾಜಕೀಯದಲ್ಲಿ ಮೀಸಲಾತಿ ತಂದವರು ಅರಸು. ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಸಂವಿಧಾನಕ್ಕೆ 73/74 ನೇ ತಿದ್ದುಪಡಿ, ಹೆಣ್ಣುಮಕ್ಕಳಿಗೆ ಮೀಸಲಾತಿ ಜಾರಿಗೆ ತಂದ ಓರ್ವ ಧೀಮಂತ ನಾಯಕರು. ಸಾಮಾಜಿಕ ನ್ಯಾಯದ ಬಗ್ಗೆ ಎಲ್ಲರೂ ದೊಡ್ಡ ಭಾಷಣ ಮಾಡುತ್ತಾರೆ. ಆದ್ರೆ ಪ್ರಾಯೋಗಿಕವಾಗಿ ಅದನ್ನ ತಮ್ಮ ನೈಜ ಜೀವನದಲ್ಲಿ ಅಳವಡಿಸಿಕೊಳ್ಳಲ್ಲ. ಕೇವಲ ತೋರಿಕೆಗಾಗಿ ಬಿಜೆಪಿಯವರು ದಲಿತರ ಮನೆಗೆ ತೆರಳಿ ತಿಂಡಿ ತಿಂದು ಬರುತ್ತಾರೆ. ಬರೀ ಗಿಮಿಕ್ ಮಾಡೋದು ಅವರ ಕೆಲಸವಾಗಿದ್ದು, ಕಾಂಗ್ರೆಸ್ ಪಕ್ಷವೊಂದೇ ಸಾಮಾಜಿಕ ನ್ಯಾಯಾಕ್ಕೆ ಬದ್ಧವಾಗಿದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ನಮ್ಮ ಸರ್ಕಾರ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮಹಾರಾಷ್ಟ್ರದಲ್ಲಿ ಹತ್ಯೆಯಾದ ದಾಬೋಲ್ಕರ್ ಮತ್ತು ಪನ್ಸಾರೆ ಆರೋಪಿಗಳ ಬಗ್ಗೆ ಬಿಜೆಪಿಯವರು ಒಂದು ಮಾತನ್ನು ಮಾತಾಡಲ್ಲ. ಇವರು ಸಹ ಒಂದು ರೀತಿಯ ಭಯೋತ್ಪಾದಕರಂತೆ ಎಂದು ಟೀಕಿಸಿದರು. ಅದೇ ಒಬ್ಬ ಮುಸ್ಲಿಂ ವ್ಯಕ್ತಿಯ ಹೆಸರು ಗೌರಿ ಪ್ರಕರಣದಲ್ಲಿ ಕೇಳಿ ಬಂದಿದ್ದರೆ, ಪ್ರತಿ ದಿನ ಟಿವಿಗಳಲ್ಲಿ ಚರ್ಚೆ ಆಗುತ್ತಿತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂತಿಮ ದರ್ಶನ ಪಡೆಯಲು ಬಂದಿದ್ದ ಸ್ವಾಮಿ ಅಗ್ನಿವೇಶ್ ಹಲ್ಲೆ ನಡೆಯಿತು. ಬಿಜೆಪಿ ವಿರುದ್ಧ ಯಾರು ಮಾತನಾಡುತ್ತಾರೆ ಅವರನ್ನ ಟಾರ್ಗೆಟ್ ಮಾಡಿ ಹಲ್ಲೆ ಮಾಡ್ತಾರೆ ಎಂದು ಆರೋಪಿಸಿದರು.

ರಾಜೀವ್ ಗಾಂಧಿ ಮತ್ತು ದೇವರಾಜು ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ವಿ ಆರ್ ಸುದರ್ಶನ್, ಮಾಜಿ ಸಚಿವ ಹೆಚ್ ಆಂಜನೇಯ, ಶಾಸಕ ಬೈರತಿ ಸುರೇಶ್, ಮಾಜಿ ಸಚಿವೆ ಮೋಟಮ್ಮ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *