ನಳಿನ್ ಕುಮಾರ್‌ಗೆ ಕನಿಷ್ಠ ಜ್ಞಾನ ಇಲ್ಲ- ಸಿದ್ದರಾಮಯ್ಯ

– ಸಿಎಂ ವಿರುದ್ಧ ಮಾಜಿ ಸಿಎಂ ಕಿಡಿ

ಬೆಂಗಳೂರು: ಬಿಜೆಪಿಯವರು ನಳಿನ್ ಕುಮಾರ್ ಕಟೀಲ್ ಅವರನ್ನು ಯಾಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೋ ಗೊತ್ತಿಲ್ಲ. ಅವರಿಗೆ ಕನಿಷ್ಠ ಜ್ಞಾನ ಅಲ್ಲದೆ ರಾಜಕೀಯ ಜ್ಞಾನವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿಕೆ ಶಿವಕುಮಾರ್ ಜೈಲಿಗೆ ಹೋಗಲು ಸಿದ್ದರಾಮಯ್ಯ ಕಾರಣ ಅನ್ನೋ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ತಿರುಗೇಟು ನೀಡಿದರು. ನಳಿನ್ ಕುಮಾರ್ ಗೆ ಕನಿಷ್ಠ ಜ್ಞಾನ ಇಲ್ಲ. ಇಡಿ, ಐಟಿ, ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಇರುತ್ತದೆ. ಈಗ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇದೆ. ಬಿಜೆಪಿಯವರು ಇಂತಹ ಹೇಳಿಕೆ ಕೊಟ್ಟು ರಾಜಕೀಯವಾಗಿ ಬೆಂಕಿ ಹಚ್ಚೋ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯವರು ಯಾಕೆ ನಳಿನ್ ಕುಮಾರ್ ನನ್ನ ಅಧ್ಯಕ್ಷ ಮಾಡಿದ್ದಾರೋ ಗೊತ್ತಿಲ್ಲ. ಕನಿಷ್ಠ ಜ್ಞಾನ ಅವ್ರಿಗೆ ಇಲ್ಲ. ಅಲ್ಲದೆ ರಾಜಕೀಯ ಜ್ಞಾನವೂ ಇಲ್ಲ. ಕರ್ನಾಟಕದ ರಾಜಕೀಯದ ಬಗ್ಗೆಯೂ ಗೊತ್ತಿಲ್ಲ. ಇದು ರಾಜಕೀಯ ಪ್ರೇರಿತ ಹೇಳಿಕೆ ಅಷ್ಟೆ. ಈ ಹೇಳಿಕೆ ದುರುದ್ದೇಶದಿಂದ ಕೂಡಿದೆ ಎಂದು ನಳಿನ್ ಕುಮಾರ್ ಕಟೀಲು ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಅವಧಿಯ 5 ಯೋಜನೆಗಳ ತನಿಖೆಗೆ ವಹಿಸಿದ ಸಿಎಂ ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು. ಯಡಿಯೂರಪ್ಪ ಸಿಎಂ ಆದ ಮೇಲೆ ಟ್ರಾನ್ಸ್ ಫರ್, ದ್ವೇಷದ ರಾಜಕಾರಣ ಮಾತ್ರ ಮಾಡುತ್ತಿದ್ದಾರೆ. ನೆರೆಗೆ ತುತ್ತಾದ ಜನರಿಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಈಶ್ವರಪ್ಪ ಅವರು ಕೊಟ್ಟಿರೋ ಹಣನೇ ಜಾಸ್ತಿ ಅಂತಾರೆ. ಜನರ ಬಗ್ಗೆ ಬಿಜೆಪಿ ಅವರಿಗೆ ಕಾಳಜಿ ಇಲ್ಲ ಎಂದು ಗರಂ ಆದರು.

ಸುಮ್ಮನೆ ಎಲ್ಲಾ ಯೋಜನೆಗಳ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಇದು ದ್ವೇಷದ ರಾಜಕಾರಣ ಅಲ್ಲದೆ ಮತ್ತೇನು ಎದು ಪ್ರಶ್ನಿಸಿದರು. ಯಡಿಯೂರಪ್ಪ ವಿಧಾನಸೌಧದಲ್ಲಿ ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದರು. ಆದರೆ ಇವತ್ತು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

4 ಕೋಟಿಯಲ್ಲಿ ವೈಟ್ ಟಾಪಿಂಗ್ ಮಾಡಬಹುದು ಅನ್ನೋ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಅದೆಲ್ಲವನ್ನೂ ಹೇಳೋದಕ್ಕೆ ಯಡಿಯೂರಪ್ಪ ಎಂಜಿನಿಯರ್ ಅಲ್ಲ. ಕಡಿಮೆ ಹಣದಲ್ಲಿ ಮಾಡೋದಾದರೆ ಯಡಿಯೂರಪ್ಪ ಮಾಡಲಿ ಎಂದರು.

ಕೃಷಿ ಹೊಂಡ ತನಿಖೆಗೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಿಎಂ, ಕೃಷಿ ಹೊಂಡ ರೈತರಿಗೆ ಅನುಕೂಲ ಆಗಿದೆ. ಯಾರೋ ಹೇಳಿದರು ಎಂದು ತನಿಖೆ ಮಾಡೋದು ಸರಿಯಲ್ಲ. ಇದು ದ್ವೇಷದ ರಾಜಕಾರಣ. ಇದು ಜಾಸ್ತಿ ದಿನ ಇರುವುದಿಲ್ಲ. ನಾನು ಸಿಎಂ ಆಗಿದ್ದಾಗ ದ್ವೇಷದ ರಾಜಕಾರಣ ಮಾಡಿಲ್ಲ. ಆದರೆ ಯಡಿಯೂರಪ್ಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Comments

Leave a Reply

Your email address will not be published. Required fields are marked *