ಸೋಲ್ತೇವೆ ಅನ್ನೋ ಹತಾಶೆಯಿಂದ ಏನೇನೋ ಮಾತಾಡ್ತವೆ – ಸಂತೋಷ್‍ಗೆ ಸಿದ್ದರಾಮಯ್ಯ ಟಾಂಗ್

ಬೆಳಗಾವಿ: ಸೋಲುತ್ತೇವೆ ಎಂಬ ಹತಾಶೆಯಿಂದ ಏನೇನೋ ಮಾತಾಡುತ್ತವೆ. ಸಂತೋಷ್‍ಗೆ ಬುದ್ಧಿ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್‍ಗೆ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅವರು ಸಿಂಗಲ್ ಡಿಜಿಟ್ ಅಷ್ಟೇ ಡಬಲ್ ದಾಟಲ್ಲ ಅಂದ್ರು. ಸಿದ್ದರಾಮಯ್ಯನ ಆತ್ಮ ಕೊಪ್ಪಳದಲ್ಲಿದೆ ಎಂಬ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನನ್ನ ಆತ್ಮ ಎಲ್ಲಾ ಕಡೆ ಇದೆ. ನನ್ನ ಆತ್ಮ ಹೃದಯದಲ್ಲಿದೆ. ಎಲ್ಲಾ ಕಡೆ ಆತ್ಮ ಇರೋಕೆ ನಾನೇನು ದೇವರು ಅಲ್ಲ ಎಂದು ಸಂತೋಷ್‍ಗೆ ತಿರುಗೇಟು ನೀಡಿದ್ರು.

ಹತ್ತು ಕೆ.ಜಿ ಅಕ್ಕಿ ಹೇಗೆ ಕೊಡ್ತಾರೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶೋಭಾ ಕರಂದ್ಲಾಜೆಗೆ ಏನೂ ಗೊತ್ತಾಗಲ್ಲ. ಏಳು ಕೆ.ಜಿ ಕೊಡುವವರಿಗೆ ಹತ್ತು ಕೆ.ಜಿ ಕೊಡುವುದಕ್ಕೆ ಆಗಲ್ವ. ಅವರು ಪೆದ್ದು ಪೆದ್ದಾಗಿ ಮಾತಾಡುತ್ತಾರೆ. ಬುದ್ಧಿ ಇಲ್ಲ ಅವಕ್ಕೆ. ಈಶ್ವರಪ್ಪ ಪೆದ್ದ. ಪೆದ್ದನ ಮಾತಿಗೆ ಉತ್ತರ ಕೊಡಲು ಆಗಲ್ಲ ಎಂದು ವ್ಯಂಗ್ಯವಾಡಿದ್ರು.

ಬಿಜೆಪಿ ಕಡೆ ಬೆರಳು ಮಾಡಿದ್ರೆ ಕೈಕಟ್ ಮಾಡುತ್ತೀವಿ ಎಂದು ಕೇಂದ್ರ ಸಚಿವ ಮನೋಜ್ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಮಾಜಿ ಸಿಎಂ, ಬಿಜೆಪಿಯವರಿಗೆ ಹೊಡಿ, ಬಡಿ, ಕೊಲೆ ಮಾಡುವುದು ಬಿಟ್ಟರೆ ಏನೂ ಗೊತ್ತಿಲ್ಲ. ಬಿಜೆಪಿಯವರು ಮನುಷ್ಯತ್ವ ಇಲ್ಲದವರು. ಮಾನವೀಯತೆ ಇಲ್ಲದವರು, ಯಾರಿಗೆ ಮಾನವೀಯತೆ ಇಲ್ಲವೋ ಅವರು ರಾಕ್ಷಸ ಗುಣದವರು ಎಂದು ಕಿಡಿಕಾರಿದ್ರು.

ಇದೇ ಸಂದರ್ಭದಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಹೇಳಿಕೆ ಕುರಿತು ಮಾತನಾಡಿದ ಅವರು, ನಾನು ಈಗಲ್ಲ ಹೇಳಿದ್ದು ಮುಂದೆ ಚುನಾವಣೆ ಬಂದಾಗ ಹೇಳಿರೋದು. ಆಗ 10 ಕೆ.ಜಿ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದೆ. ನಮ್ಮ ಪಕ್ಷ ಸ್ವಂತ ಶಕ್ತಿ ಮೇಲೆ ಬಂದ ಬಳಿಕ ಸಿಎಂ ಆಗ್ತೀನಿ ಎಂದು ಹೇಳಿರುವುದು ಎಂದು ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *