ಸಂಸದರಾದ ನಳಿನ್, ಶೋಭಾ ಕರಂದ್ಲಾಜೆ ಏನ್ ಮಾಡ್ತಿದ್ದಾರೆ- ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಉಡುಪಿಯ ಮಲ್ಪೆಯಿಂದ ನಾಪತ್ತೆಯಾದ ಮೀನುಗಾರರ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆಯವರನ್ನು ಪ್ರಶ್ನಿಸಿದ್ದಾರೆ.

ಮಲ್ಪೆಯ ಮೀನುಗಾರರು ನಾಪತ್ತೆಯಾಗಿ ಎರಡೂವರೆ ತಿಂಗಳುಗಳೇ ಕಳೆಯಿತು. ಅವರನ್ನು ಪತ್ತೆ ಹಚ್ಚುವ ಕೆಲಸ ಯಾಕೆ ಮಾಡಿಲ್ಲ ಎಂದು ಸಂಸದರ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಗರಂ ಆಗಿದ್ದಾರೆ.

ಟ್ವೀಟ್ ನಲ್ಲೇನಿದೆ..?
ಮಲ್ಪೆಯ ಮೀನುಗಾರರು ಸಮುದ್ರದಲ್ಲಿ ನಾಪತ್ತೆಯಾಗಿ ಎರಡೂವರೆ ತಿಂಗಳ ಮೇಲಾಯಿತು. ಸಂಸದರಾದ ನಳಿನ್‍ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಏನು ಮಾಡ್ತಿದ್ದಾರೆ? ಅವರನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರಾ? ಇಂತಹ ಪ್ರತಿನಿಧಿಗಳು ಬೇಕಾ? ಜನ ಯೋಚನೆ ಮಾಡಬೇಕು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಡಿಸೆಂಬರ್ 13ರ ರಾತ್ರಿ ಉಡುಪಿಯ ಮಲ್ಪೆಯಿಂದ `ಸುವರ್ಣ ತ್ರಿಭುಜ’ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಗೋವಾ ಮಹಾರಾಷ್ಟ್ರ ಗಡಿ ಕಡೆ ಕಸುಬು ಮಾಡಲು ತೆರಳಿತ್ತು. ಈ ದೋಣಿಯಲ್ಲಿ 7 ಮಂದಿ ಮೀನುಗಾರರು ಇದ್ದರು. ಡಿಸೆಂಬರ್ 15ರ ಮಧ್ಯರಾತ್ರಿ 1 ಗಂಟೆ ನಂತರ ಬೋಟ್ ನ ಜಿಪಿಎಸ್ ಮತ್ತು ಫೋನ್ ಸಂಪರ್ಕ ಕಡಿತವಾಗಿದೆ. ಸಮುದ್ರದಲ್ಲಿ ಎಲ್ಲಿ ಹುಡುಕಾಟ ನಡೆಸಿದ್ರೂ ಬೋಟ್, ಮೀನುಗಾರರು ಪತ್ತೆಯಾಗಿಲ್ಲ. ಕೋಸ್ಟ್ ಗಾರ್ಡ್ ನೌಕಾದಳ, ಏರ್ ಫೋರ್ಸ್ ಅಧಿಕಾರಿಗಳು ಹುಡುಕಾಟ ಮಾಡಿದ್ರೂ ಉಪಯೋಗವಾಗಿಲ್ಲ. ಸಮುದ್ರದ ಗಡಿಯಲ್ಲಿ ಮೀನುಗಾರರು ಕಣ್ಮರೆಯಾಗಿರುವ ವಿಚಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ಬಂದರೂ ಈವರೆಗೆ ಯಾವುದೇ ಫಲಿತಾಂಶ ಸಿಕ್ಕಿಲ್ಲ.

ಇತ್ತೀಚೆಗೆ ಉಡುಪಿಯಲ್ಲಿ ನಡೆದ ನಮೋ ಭಾರತ್ ಸಂಘಟನೆಯಿಂದ ಪಾಂಚಜನ್ಯ ಸಮಾವೇಶದ ಭಾಷಣದ ವೇಳೆ ಬಿಜೆಪಿ ಸಂಸದೆ, ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿಯವರು, ನಾಪತ್ತೆಯಾಗಿರುವ ಮೀನುಗಾರರು ದುಬೈನಲ್ಲಿ ಪತ್ತೆಯಾಗಿರುವ ಮಾಹಿತಿ ಲಭಿಸಿರುವುದಾಗಿ ಹೇಳಿದ್ದರು. ಅಲ್ಲದೆ ದುಬೈನಲ್ಲಿ ಪತ್ತೆಯಾದವರು ಮಲ್ಪೆ ಮೀನುಗಾರರೇ ಎಂಬುದು ಖಚಿತವಾದರೆ ಸರ್ಕಾರ ಅವರನ್ನು ವಾಪಸ್ ಕರೆತರಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *