ಹೈಕಮಾಂಡ್ ಗೆ ಮಾಜಿ ಸಿಎಂರಿಂದ ಸ್ಪಷ್ಟ ಮಾಹಿತಿ ರವಾನೆ!

ಬೆಂಗಳೂರು: ಇನ್ಮುಂದೆ ಯಾವುದೇ ಚುನಾವಣೆಗೆ ಸ್ವರ್ಧಿಸದಿರಲು ಮಾಜಿ ಸಿಎಂ ಸಿದ್ದರಾಮಯ್ಯ ತಿರ್ಮಾನಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್‍ಗೆ ಮಾಹಿತಿ ರವಾನಿಸುವ ಮೂಲಕ ಲೋಕಸಭೆಗೆ ಸಿದ್ದರಾಮಯ್ಯ ಸ್ವರ್ಧಿಸುತ್ತಾರೆ ಎನ್ನುವ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

ಲೋಕಸಭೆ ಅಥವಾ ರಾಜ್ಯಸಭೆಯಿಂದ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಾರೆ ಅನ್ನೊ ಮಾತುಗಳು ಕೇಳಿ ಬಂದಿದ್ದವು. ಜೊತೆಗೆ ಹೈಕಮಾಂಡ್ ಕೂಡಾ ಲೋಕಸಭೆ ಕುಸ್ತಿಗೆ ತಯಾರಾಗುವಂತೆ ಸೂಚನೆ ನೀಡಿತ್ತು ಎನ್ನಲಾಗಿತ್ತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊನೆಯ ಚುನಾವಣೆ ಅಂತಾ ಘೋಷಿಸಿಕೊಂಡ ಹಿನ್ನೆಲೆಯಲ್ಲಿ ಮುಂದಿನ ಯಾವುದೇ ಚುನಾವಣೆಗೆ ಸ್ವರ್ಧಿಸದಿರಲು ಸಿದ್ದರಾಮಯ್ಯ ಯೋಚಿಸಿದ್ದಾರಂತೆ. ವಯಸ್ಸು 75ರ ಆಸುಪಾಸಿನಲ್ಲಿದ್ದು, ಚುನಾವಣಾ ರಾಜಕೀಯದಿಂದ ದೂರ ಸರಿದು ಕೇವಲ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರಲು ಸಿದ್ದರಾಮಯ್ಯ ಯೋಚಿಸಿದ್ದಾರೆ ಅಂತ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಶನಿವಾರ ದೆಹಲಿಯಲ್ಲಿ ನಡೆದ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದು, ಹೈಕಮಾಂಡ್ ಬಳಿ ಸಾಕಷ್ಟು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಆಷಾಢ ಮುಗಿಯುತ್ತಿದ್ದಂತೆಯೇ ಸಂಪುಟ ವಿಸ್ತರಣೆ ಹಾಗೂ ನಿಗಮಂಡಳಿಗೆ ಮುಹೂರ್ತ ನಿಗದಿ ಪಡಿಸುವ ಸಂಬಂಧ ಕೂಡ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯಗೇಕೆ `ಲೋಕ’ ಜವಾಬ್ದಾರಿ??
2014ರ ಚುನಾವಣೆಯಲ್ಲಿ 9 ಸಂಸದರನ್ನು ಗೆಲ್ಲಿಸಿದ ಹೆಗ್ಗಳಿಕೆ ಸಿದ್ದರಾಮಯ್ಯನವರಿಗಿದ್ದು, ಅಹಿಂದ ಮತಗಳನ್ನು ಸೆಳೆಯಬಲ್ಲ ರಾಜ್ಯದ ಏಕೈಕ ನಾಯಕರಾಗಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಖರ್ಗೆ ಬ್ಯುಸಿ ಆಗಿದ್ದು ಮೋದಿ ಅಲೆಯನ್ನು ಹಿಮ್ಮೆಟ್ಟಿಸುವ ಶಕ್ತಿ ಸಿದ್ದರಾಮಯ್ಯನವರಿಗಿದೆ ಎನ್ನುವುದನ್ನು ಕಾಂಗ್ರೆಸ್ ಅರಿತಿದೆ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಅನುಭವ ಸ್ವಲ್ಪ ಕಡಿಮೆ ಇದೆ. ಇದರ ಜೊತೆ ಹೈಕಮಾಂಡ್ ಜೊತೆ ನಿಕಟ ಸಂಪರ್ಕ ಹೊಂದಿರುವ ಕಾರಣ ಸಿದ್ದರಾಮಯ್ಯನವರಿಗೆ ಈ ಜವಾಬ್ದಾರಿ ಸಿಕ್ಕಿದೆ.

Comments

Leave a Reply

Your email address will not be published. Required fields are marked *