ಬಿಜೆಪಿಯ ಸ್ವಯಂಕೃತ ಅಪರಾಧದಿಂದ್ಲೇ ಸರ್ಕಾರ ಬೀಳುತ್ತೆ- ಸಿದ್ದರಾಮಯ್ಯ

– ಇತಿಹಾಸದಲ್ಲೇ ಮೊದ್ಲ ಬಾರಿಗೆ ಮೂವರು ಡಿಸಿಎಂ

ಬಾಗಲಕೋಟೆ: ಕರ್ನಾಟಕದ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ಆಯುಷ್ಯ ಕಡಿಮೆ ಇದೆ. ಬಿಜೆಪಿಯ ಸ್ವಯಂಕೃತ ಅಪರಾಧದಿಂದಲೇ ಸರ್ಕಾರ ಬೀಳುತ್ತದೆ. ಆದ್ದರಿಂದ ನಾವೇನು ಸರ್ಕಾರ ಕೆಡುವೊಕೆ ಕೈ ಹಾಕಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೂವರು ಉಪಮುಖ್ಯಮಂತ್ರಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಡಿಸಿಎಂ ಹುದ್ದೆ ಸಂವಿಧಾನ ಹುದ್ದೆ ಅಲ್ಲ. ವಿಶೇಷ ಅಧಿಕಾರ ಇಲ್ಲ. ಇಲ್ಲಿ ಯಡಿಯೂರಪ್ಪರನ್ನು ಕಟ್ಟಿ ಹಾಕೋಕೆ ಮಾಡಿದ್ದಾರೆ ಅಷ್ಟೇ ಎಂದು ಹೇಳಿದರು.

ಯಡಿಯೂರಪ್ಪಗೆ ಇಷ್ಟ ಇಲ್ಲದಿದ್ದರೂ ಹೈಕಮಾಂಡ್ ಮೂವರು ಡಿಸಿಎಂಗಳನ್ನು ಆಯ್ಕೆ ಮಾಡಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿಗೂ ಯಡಿಯೂರಪ್ಪಗೂ ಆಗಲ್ಲ. ಹೀಗಾಗಿ ಯಡಿಯೂರಪ್ಪರನ್ನು ಕಾರ್ನರ್ ಮಾಡುವ ಉದ್ದೇಶ ಇದಾಗಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಇಷ್ಟ ಇರಲಿಲ್ಲ. ಚುನಾವಣೆಗೆ ಹೋಗಬೇಕು ಎಂದು ಅಂದುಕೊಂಡಿದ್ದರು. ಆದರೆ ಯಡಿಯೂರಪ್ಪ ಅವರೇ ಗೋಗರೆದು ಮುಖ್ಯಮಂತ್ರಿ ಆಗಿದ್ದಾರೆ. ಪರಿಣಾಮ ಎಷ್ಟು ದಿನ ಇರ್ತಾರೆ ಹೇಳೋಕೆ ಆಗಲ್ಲ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಹಿರಿತನಕ್ಕೆ ಬೆಲೆಯಿಲ್ಲ. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದರು. ಈಶ್ವರಪ್ಪ-ಅಶೋಕ್ ಡಿಸಿಎಂ ಆಗಿದ್ದರು. ಅವರನ್ನು ಈಗ ಡಿಸಿಎಂ ಮಾಡಿಲ್ಲ. ಅಶ್ವಥ್ ನಾರಾಯಣ ಹಾಗೂ ಶಾಸಕನೇ ಆಗದಿರುವಂತಹ ಸವದಿಯನ್ನು ಡಿಸಿಎಂ ಮಾಡಿದ್ದಾರೆ. ಜನತಾದಳದಿಂದ ಕಾರಜೋಳರನ್ನು ಡಿಸಿಎಂ ಮಾಡಿದ್ದಾರೆ. ಹೀಗಾಗಿ ಸಹಜವಾಗಿಯೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ ಆಗುತ್ತದೆ ಎಂದು ನುಡಿದರು.

ಬಿಜೆಪಿಯವರ ಭಾರದಿಂದ ಅವರೇ ಬೀಳುತ್ತಾರೆ. ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಮೂವರು ಡಿಸಿಎಂ ಆಗಿದ್ದಾರೆ. ಇಬ್ಬರು ಡಿಸಿಎಂ ಮಾಡಿದ್ದು ಇವರೇ, ಈಗ ಮೂವರು ಡಿಸಿಎಂ ಮಾಡಿದ್ದು ಇವರೇ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

Comments

Leave a Reply

Your email address will not be published. Required fields are marked *