ನನ್ನ ವಿರುದ್ಧ ಷಡ್ಯಂತ್ರ – ಬಿಜೆಪಿಗೆ ಗುಡ್‌ಬೈ ಹೇಳಿದ ಶೆಟ್ಟರ್‌

ಧಾರವಾಡ: ಹೈಕಮಾಂಡ್‌ ನಾಯಕರ ಸಂಧಾನಕ್ಕೆ ಜಗ್ಗದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ (Jagadish Shettar) ಬಿಜೆಪಿಗೆ (BJP) ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಇಂದು ರಾತ್ರಿ ಶೆಟ್ಟರ್ ಮನೆಗೆ ಧರ್ಮೇಂದ್ರ ಪ್ರಧಾನ್, ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಿ ಸಂಧಾನ ಮಾತುಕತೆ ನಡೆಸಿದ್ದರು. ಆದರೆ ಈ ಮಾತುಕತೆ ವಿಫಲವಾದ ಬಳಿಕ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು.

15 ದಿನಗಳ ಹಿಂದೆ ರಾಜಕೀಯ ನಿವೃತ್ತಿಯಾಗಬೇಕು ಎಂದು ಹೇಳಿದ್ದರೆ ನಾನು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಹೇಳುತ್ತಿದ್ದೆ. ಆದರೆ ಯಾವುದೇ ಮಾಹಿತಿ ನೀಡದೇ ಕೊನೆಯವರೆಗೆ ಸತಾಯಿಸಿದ್ದಾರೆ. ಈ ಕಾರಣಕ್ಕೆ ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಹೇಳಿದರು.  ಇದನ್ನೂ ಓದಿ: ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ರೌಡಿ ಅತಿಕ್‌ ಅಹ್ಮದ್‌, ಸಹೋದರ ಗ್ಯಾಂಗ್‌ವಾರ್‌ಗೆ ಬಲಿ

ಭಾನುವಾರ ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ  ಪತ್ರ ನೀಡುತ್ತೇನೆ. ನಂತರ ನನ್ನ ಹಿತೈಷಿಗಳ ಜೊತೆ ಸೇರಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಶೆಟ್ಟರ್‌ ತಿಳಿಸಿದರು.

 

ನರೇಂದ್ರ ಮೋದಿ, ಅಮಿತ್‌ ಶಾ ಅವರಿಗೆ ತಿಳಿಯದಂತೆ ನನ್ನ ವಿರುದ್ಧ ಕೆಲವರು ಷಡ್ಯಂತ್ರ ಮಾಡಿದ್ದಾರೆ. ನನಗೆ ಟಿಕೆಟ್‌ ಬಿಟ್ಟು ದೊಡ್ಡ ಹುದ್ದೆ, ಕುಟುಂಬದವರಿಗೆ ಟಿಕೆಟ್‌ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ನಾನು ಮೊದಲೇ ನಿರ್ಧಾರ ಮಾಡಿದಂತೆ ಈ ಚುನಾವಣೆಯಲ್ಲಿ ನಿಲ್ಲುತ್ತೇನೆ. ಭಾರೀ ಮತಗಳ ಅಂತರದಿಂದ ಈ ಬಾರಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.