ಡಿಕೆಶಿ ಪರ ಹೋರಾಟಕ್ಕೆ ಎಚ್‍ಡಿಕೆ ಗೈರು?

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಪರ ಒಕ್ಕಲಿಗರ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗೈರಾಗುವ ಸಾಧ್ಯತೆಗಳಿವೆ.

ಎಚ್ ಡಿಕೆ ಅವರು ತಮ್ಮ ಸ್ವಕ್ಷೇತ್ರಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆಯಲ್ಲಿ ಮಾಜಿ ಸಿಎಂ ಭಾಗವಹಿಸುತ್ತಿಲ್ಲ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಬೆಳಗ್ಗೆ 10 ಗಂಟೆಗೆ ಚನ್ನಪಟ್ಟಣಕ್ಕೆ ತೆರಳಲಿರುವ ಎಚ್‍ಡಿಕೆ, ವಿವಿಧ ಕಾರ್ಯಕ್ರಮ, ಕೆಡಿಪಿ ಸಭೆ ಸೇರಿದಂತೆ ಹಲವು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿಂದ ಸಂಜೆ ಮೈಸೂರಿಗೆ ತೆರಳಲಿದ್ದಾರೆ. ನಾಳೆ ಮೈಸೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.

ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಇಂದು ಸಿಲಿಕಾನ್ ಸಿಟಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಈಗಾಗಲೇ ಜಿಲ್ಲೆಗಳ ಡಿಕೆಶಿ ಅಭಿಮಾನಿಗಳು ಬೆಂಗಳೂರಿನತ್ತ ಧಾವಿಸುತ್ತಿದ್ದಾರೆ. ಒಕ್ಕಲಿಗರ ಸಮುದಾಯ ಈ ಪ್ರತಿಭಟನೆಯನ್ನು ಆಯೋಜಿಸಿದ್ದು, ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ನ್ಯಾಷನಲ್ ಕಾಲೇಜ್ ಗ್ರೌಂಡ್ ಹೊರ ಭಾಗದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೈದಾನದ ಹೊರ ಭಾಗದಲ್ಲಿ ಸಾಲು ಸಾಲು ಪೊಲೀಸ್ ವಾಹನಗಳು ನಿಂತಿವೆ. ಮೈದಾನ ಹೊರಗಡೆ ಯಾವುದೇ ಅಹಿತಕರ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.

Comments

Leave a Reply

Your email address will not be published. Required fields are marked *