ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಾಮಾನ್ಯವಾಗಿ ಎಲ್ಲರೂ ತಲೆ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದೆನೆಯೇ ಹೊರತು ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ. ಈ ಕುರಿತು ಪ್ರಮುಖ ಮಠಗಳ ಹಿರಿಯ ಸ್ವಾಮೀಜಿಗಳು ಮೌನವಾಗಿದ್ದಾರೆ, ಅವರಿಗೆ ಕೃತಜ್ಞತಾಪೂರ್ವಕ ನಮನಗಳು ಎಂದು ಮಾಜಿ ಸಿಎಂ ಹೇಳಿದ್ದಾರೆ.

ಸರಣಿ ಟ್ವೀಟ್‍ನಲ್ಲೇನಿದೆ..?
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನಮ್ಮ ತಾಯಂದಿರು ಸೇರಿದಂತೆ ಸಾಮಾನ್ಯವಾಗಿ ಎಲ್ಲರೂ ತಲೆ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದೆನೆಯೇ ಹೊರತು ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ಅಗೌರವ ತೋರಿಲ್ಲ. ಅನಗತ್ಯವಾಗಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ.

ಸರ್ವ ಜಾತಿಗಳ ಸ್ವಾಮೀಜಿಗಳ ಬಗ್ಗೆ ನನಗೆ ಗೌರವವಿದೆ, ದೀರ್ಘಕಾಲದಿಂದ ನನಗೆ ಅವರ ಜೊತೆ ಹಾರ್ದಿಕ ಸಂಬಂಧ ಇದೆ. ಯಾವ ಸ್ವಾಮೀಜಿಗಳ ಬಗ್ಗೆಯೂ, ಯಾವಾಗಲೂ ನಾನು ಅಗೌರವದಿಂದ ನಡೆದುಕೊಂಡಿಲ್ಲ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಇದನ್ನೂ ಓದಿ: ನಮ್ಮ-ನಿಮ್ಮೆಲ್ಲರ ರಕ್ತ ಒಂದೇ ಬಣ್ಣದ್ದು, ಮೂರು ದಿನಗಳ ಬಾಳಲ್ಲಿ ಏಕೆ ಕಿತ್ತಾಟ?: ಹ್ಯಾರೀಸ್

ರಾಜಕೀಯ ವಿರೋಧಿಗಳು ದುರುದ್ದೇಶದಿಂದ ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕೆಲವು ಮಾಧ್ಯಮಗಳು ಕೂಡಾ ಸಾಥ್ ನೀಡಿರುವುದು ವಿಷಾದನೀಯ ಬೆಳವಣಿಗೆ. ನನ್ನ ಹೇಳಿಕೆಯನ್ನು ತಿರುಚಿರುವುದು ರಾಜ್ಯದ ಪ್ರಮುಖ ಮಠಗಳ ಹಿರಿಯ ಸ್ವಾಮೀಜಿಗಳಿಗೆ ಅರ್ಥವಾಗಿರುವ ಕಾರಣಕ್ಕಾಗಿಯೇ ಅವರು ಮೌನವಾಗಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತಾಪೂರ್ವಕ ನಮನಗಳು ಎಂದು ಮಾಜಿ ಸಿಎಂ ಬರೆದುಕೊಂಡಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು..?
ಮೈಸೂರು ಜಿಲ್ಲೆಯ ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಮೂರು ದಿನಗಳಕಾಲ ನಡೆಯುತ್ತಿರುವ ಶ್ರೀ ಸಿದ್ದರಾಮೇಶ್ವರ ಚಿಕ್ಕಮ್ಮತಾಯಿ ಜಾತ್ರಾಮಹೋತ್ಸವಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಹಿಜಬ್ ವಿವಾದಕ್ಕೆ ಬಿಜೆಪಿಯೇ ಕಾರಣ. ಹಿಂದೂ ಹೆಣ್ಣು ಮಕ್ಕಳು ತಲೆಯ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ? ಹಾಗೆಯೇ ಮುಸ್ಲಿಂ ಹೆಣ್ಣು ಮಕ್ಕಳೂ ಒಂದು ದುಪ್ಪಟ್ಟ ಹಾಕಿಕೊಳ್ಳುತ್ತೇನೆ ಅಂದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು: ಅಭಿನವ ಮಂಜುನಾಥ ಶ್ರೀ

ಸ್ವಾಮೀಜಿಗಳು ಕೂಡ ತಲೆಯ ಮೇಲೆ ಬಟ್ಟೆ ಹಾಕುತ್ತಾರೆ. ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಇಂತಹ ವಿವಾದಗಳನ್ನು ಸೃಷ್ಟಿಸಿ ಅದನ್ನು ಅರಗಿಸಿ ಕೊಳ್ಳುತ್ತೇವೆ ಎಂದು ಬಿಜೆಪಿ ಅಂದುಕೊಂಡಿದೆ. ಆದರೆ ಜನ ಬುದ್ದಿವಂತರು, ಜನರಿಗೆ ಬಿಜೆಪಿಯ ತಂತ್ರ ಅರ್ಥವಾಗಿದೆ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *