ರಕ್ಷಣೆ ಬೇಕಾದಾಗ ಎನ್‍ಕೌಂಟರ್ ಮಾಡಬಹುದು, ಡೆಲಿಬರೇಟ್ ಆಗಿ ಎನ್‍ಕೌಂಟರ್ ಮಾಡಬಾರದು: ಸಿದ್ದರಾಮಯ್ಯ

ರಾಯಚೂರು: ರಕ್ಷಣೆ ಬೇಕಾದಾಗ ಎನ್‍ಕೌಂಟರ್ ಮಾಡಬಹುದು, ಡೆಲಿಬರೇಟ್ ಆಗಿ ಎನ್‍ಕೌಂಟರ್ ಮಾಡಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರಾಯಚೂರಿನ ಸಿಂಧನೂರಿನಲ್ಲಿ ಸಿದ್ದರಾಮಯ್ಯನವರು ಹೈದರಾಬಾದ್ ಎನ್‍ಕೌಂಟರ್ ವಿಚಾರವಾಗಿ ಮಾತನಾಡಿ, ಪೊಲೀಸರಿಗೆ ರಕ್ಷಣೆ ಬೇಕಾದಾಗ, ಆರೋಪಿಗಳು ತಪ್ಪಿಸಿಕೊಂಡು ಹೋದಾಗ ಎನ್‍ಕೌಂಟರ್ ಮಾಡಬಹುದು. ಡೆಲಿಬರೇಟ್ ಆಗಿ ಎನ್‍ಕೌಂಟರ್ ಮಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಲಾಯರ್ ಆಗಿ ನಾನು ಹೇಳುತ್ತಿದ್ದೇನೆ ಸುಮ್ಮನೆ ಹೇಳಲ್ಲ. ಇಂತಹ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು. ನಮ್ಮ ದೇಶದಲ್ಲಿ ಮರಣದಂಡನೆ ಶಿಕ್ಷೆಯಿಲ್ಲ, ಅದನ್ನು ಜಾರಿಗೆ ತರಬೇಕು ಎಂದು ಹೇಳಿದರು.

ಇದೇ ವೇಳೆ ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿ, ಉಪಚುನಾವಣೆಯಲ್ಲಿ 12 ಸ್ಥಾನ ಗೆಲ್ಲುತ್ತೇವೆ 15 ಸ್ಥಾನ ಗೆದ್ದರೂ ಅಚ್ಚರಿಯಿಲ್ಲ ಎಂದರು. ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷಾಂತರಿಗಳಿಗೆ ವಿರೋಧ ಅಲೆಯಿದೆ. ಪಕ್ಷಾಂತರಿಗಳನ್ನು ಜನ ತಿರಸ್ಕರಿಸಿದ್ದಾರೆ. 12 ಸೀಟ್ ಗೆದ್ದರೆ ನಮಗೆ ಅವಕಾಶ ಇದೆ. ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದರು.

ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಫಲಿತಾಂಶ ಮೇಲೆ ಅವಲಂಬಿಸಿದೆ. ದೇವೇಗೌಡರು ಒಮ್ಮೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ಹೇಳುತ್ತಾರೆ. ಇನ್ನೊಮ್ಮೆ ಸೋನಿಯಾ ಗಾಂಧಿ ಜೊತೆ ಮಾತನಾಡುತ್ತೇನೆ ಎನ್ನುತ್ತಾರೆ ಎಂದು ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಬಾರದು ಎಂದು ನಾವು ಎಲ್ಲಿಯೂ ಹೇಳಿಲ್ಲ. ಪಕ್ಷದಲ್ಲಿ ಯಾರನ್ನು ಐಸೋಲೆಟ್ ಮಾಡುವ ಕೆಲಸ ನಡೆದಿಲ್ಲ. ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

Comments

Leave a Reply

Your email address will not be published. Required fields are marked *