ಗದಗಿನ ಮಾಗಡಿ ಕೆರೆಯಲ್ಲಿ ವಿದೇಶಿ ಬಾನಾಡಿಗಳ ಕಲರವ

ಗದಗ: ಉತ್ತರ ಕರ್ನಾಟಕದ ಗದಗ ಜಿಲ್ಲೆಯಲ್ಲೂ ಪಕ್ಷಿದಾಮವೊಂದು ಪ್ರಸಿದ್ಧಿಯಾಗಿದ್ದು, ಪ್ರತಿವರ್ಷ ಚಳಿಗಾಲದಲ್ಲಿ ವಿದೇಶಿ ಬಾನಾಡಿಗಳ ದಂಡು ಇಲ್ಲಿ ಲಗ್ಗೆ ಇಡುತ್ತವೆ. ಅಲ್ಲಿಯ ವಿದೇಶಿ ಬಾನಾಡಿಗಳ ಚಿಲಿಪಿಲಿ ಕಲರವಗಳ ಚೆಲ್ಲಾಟ ನೋಡಲು ಎರಡು ಕಣ್ಣುಗಳು ಸಾಲದು.

ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಸುಮಾರು 130 ಎಕರೆ ವಿಸ್ತೀರ್ಣ ಹೊಂದಿರುವ ಐತಿಹಾಸಿಕ ಕೆರೆಯಿದು. ದೇಶ-ವಿದೇಶಿ ಪಕ್ಷಿಗಳ ಆಗಮನದಿಂದ ಪ್ರವಾಸಿಗರನ್ನು ಈ ಕೆರೆ ಆಕರ್ಷಿಸುತ್ತಿದೆ. ಮಂಗೊಲಿಯಾ, ಆಸ್ಟ್ರೇಲಿಯಾ, ಜಪಾನ್, ಪಾಕಿಸ್ತಾನ್, ಟಿಬೇಟ್ ಹೀಗೆ ಅನೇಕ ಕಡೆಯಿಂದ ಸಾವಿರಾರು ಹಕ್ಕಿಗಳು ಪ್ರತಿವರ್ಷ ಚಳಿಗಾಲಕ್ಕೆ ಇಲ್ಲಿಗೆ ಲಗ್ಗೆ ಇಡುತ್ತವೆ. ಆ ದೇಶದ ಹವಾಮಾನವೇ ಈ ಪಕ್ಷಿಗಳು ಇಲ್ಲಿಗೆ ಬರಲು ಕಾರಣ ಎನ್ನಲಾಗುತ್ತಿದೆ.

ಜಿಲ್ಲೆ ಮಾಗಡಿ ಕೆರೆಗೆ ಬರುವ ಪಕ್ಷಿಗಳಾದ ಬಾರ್ ಹೆಡೆಡ್ ಗೂಸ್, ಬ್ರಾಮಿಣಿ ಡೆಕ್, ಬ್ಲಾಕ್ ಐಬಿಸ್, ಇಟಲ್ ಗಿಬ್ಸ್, ರೆಡ್ ಥಾರ್ಟ್, ಪಾಂಟೆಡ್ ಸ್ಪಾರ್ಕ್ ಸೇರಿದಂತೆ ಅನೇಕ ಜಾತಿಯ ವಿದೇಶಿ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಈ ಪಕ್ಷಿಗಳ ಹಾರಾಟ, ಕೂಗಾಟ ಅಂದ-ಚಂದ ಸವಿಯಲು ಎರಡು ಕಣ್ಣುಗಳು ಸಾಲದು. ಗುಂಪು ಗುಂಪಾಗಿ ರಾಕೆಟ್‍ನಂತೆ ಹಾರಿ ಬರುತ್ತವೆ. ಇವುಗಳನ್ನ ನೋಡಲು ಅನೇಕ ಜಿಲ್ಲೆಗಳಿಂದ ಜನರು ಬರುತ್ತಾರೆ. ಕೆಲವು ಪಕ್ಷಿ ಪ್ರೇಮಿಗಳು ಇವುಗಳ ಫೋಟೋ ಶೂಟ್‍ಗಾಗಿ ಅಂತಾನೆ ಬಂದು, ಕೆರೆಯ ದಡದಲ್ಲಿ ಕೂತು ಫೋಟೋ ಕ್ಲಿಕ್ ಮಾಡುವ ಮೂಲಕ ಸಂತೋಷ ಪಡುತ್ತಾರೆ.

ವಿದೇಶಿ ಪಕ್ಷಿಗಳು ಡಿಸೆಂಬರ್ ತಿಂಗಳಲ್ಲಿ ಈ ಕೆರೆಗೆ ಬರಲು ಪ್ರಾರಂಭಿಸುತ್ತವೆ. ಫೆಬ್ರವರಿವರೆಗೆ ಅಂದರೆ ಸುಮಾರು ಮೂರು-ನಾಲ್ಕು ತಿಂಗಳ ಕಾಲ ಈ ಮಾಗಡಿ ಕೆರೆಯಲ್ಲಿ ಪಕ್ಷಿಗಳು ವಾಸವಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ವಿದೇಶಿ ಪಕ್ಷಿಗಳು ರಾತ್ರಿಯಾಗುತ್ತಿದ್ದಂತೆ ಆಹಾರಕ್ಕಾಗಿ ಸುತ್ತಮುತ್ತಲಿನ ಜಮೀನುಗಳಿಗೆ ಹೊರಡುತ್ತವೆ. ರಾತ್ರಿ ಹೊತ್ತು ಆಹಾರಕ್ಕೆ ಹೋದರೆ ಮತ್ತೆ ಮುಂಜಾನೆ ಕೆರೆಗೆ ಮರಳುತ್ತವೆ.

ಈ ಪಕ್ಷಿಗಳನ್ನ ನೋಡಲು ನಿತ್ಯವು ರಾಜ್ಯದ ನಾನಾ ಭಾಗದಿಂದಲೂ ಅಷ್ಟೇ ಅಲ್ಲ, ಗೋವಾ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಪ್ರವಾಸಿಗರು ಸಹ ಇಲ್ಲಿಗೆ ಬರುತ್ತಿದ್ದಾರೆ. ಹೀಗಾಗಿ ಕೆರೆ ಸುತ್ತಲು ಫುಟ್ ಪಾತ್, ಕುಡಿಯುವ ನೀರು, ಉದ್ಯಾನವನ, ಕುಳಿತುಕೊಳ್ಳಲು ಬೆಂಚ್ ಅಥವಾ ಆಸನದ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಕ್ಯಾಂಟೀನ್ ಹೀಗೆ ಪ್ರವಾಸಿಗರಿಗೆ ಅನೇಕ ಮೂಲಭೂತ ಸೌಲಭ್ಯಗಳನ್ನ ನೀಡಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರತ್ತ ಗಮನ ಹರಿಸಬೇಕು ಎಂಬುದು ಪ್ರವಾಸಿಗರ ಹಾಗೂ ಸ್ಥಳೀಯರ ಬೇಡಿಕೆಯಾಗಿದೆ.

Comments

Leave a Reply

Your email address will not be published. Required fields are marked *