ಭಾರತದಲ್ಲಿ ಬಾಗಿಲು ಮುಚ್ಚಲಿದೆ ಫೋರ್ಡ್

ನವದೆಹಲಿ: ಪ್ರತಿಷ್ಠಿತ ಆಟೋಮೊಬೈಲ್ ಸಂಸ್ಥೆ ಫೋರ್ಡ್, ಭಾರತದಲ್ಲಿ ತನ್ನ ಎರಡು ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಭಾರತದಲ್ಲಿನ ತಯಾರಿಕಾ ಘಟಕಗಳನ್ನು ಮುಂದುವರಿಸುವುದು ತನಗೆ ಅಷ್ಟೊಂದು ಲಾಭದಾಯಕವಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಫೋರ್ಡ್ ಮಸ್ಟಾಂಗ್ ಮತ್ತು ಮುಂದಿನ ದಿನಗಳಲ್ಲಿ ಬರಲಿರುವ ಹೈಬ್ರಿಡ್/ಎಲೆಕ್ಟ್ರಿಕ್ ವಾಹನಗಳನ್ನು ಆಮದು ಮೂಲಕ ಮಾರಾಟವನ್ನು ಮುಂದುವರಿಸುವುದಾಗಿ ಫೋರ್ಡ್ ಸಂಸ್ಥೆ ಹೇಳಿದೆ. ಹಾಲಿ ಗ್ರಾಹಕರಿಗೆ ಅಗತ್ಯ ಸೇವೆ ಒದಗಿಸಲು ಡೀಲರ್‌ಗಳಿಗೆ ಬೆಂಬಲ ಒದಗಿಸುವುದಾಗಿ ಭರವಸೆ ಕೊಟ್ಟಿದ್ದು, ಫಿಗೊ, ಅಸ್ಪೈರ್, ಫ್ರೀಸ್ಟೈಲ್, ಇಕೋಸ್ಪೋರ್ಟ್ ಮತ್ತು ಎಂಡೇವರ್ ಕಾರುಗಳ ಮಾರಾಟ ಡೀಲರ್‌ಗಳ ಬಳಿ ಇರುವ ಸ್ಟಾಕ್ ಮುಗಿಯುವವರೆಗೆ ಮುಂದುವರೆಯಲಿದೆ.

1994ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದ್ದ ಫೋರ್ಡ್, 27 ವರ್ಷಗಳ ನಂತರ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದೆ. ಭಾರತದಲ್ಲಿ 2.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದ ಫೋರ್ಡ್ ಕಂಪನಿಯು 2 ಬಿಲಿಯನ್ ಡಾಲರ್‌ನಷ್ಟು ನಷ್ಟ ಅನುಭವಿಸಿದೆ. ಭಾರತದಲ್ಲಿನ ಘಟಕಗಳನ್ನು ಸ್ಥಗಿತಗೊಳಿಸುವುದರಿಂದ ಸುಮಾರು 4 ಸಾವಿರ ಉದ್ಯೋಗಿಗಳ ಸ್ಥಿತಿ ಅತಂತ್ರವಾಗಲಿದೆ.

ಗುಜರಾತ್‌ನಲ್ಲಿರುವ ಸನಂದ್‌ನ ರಫ್ತು ವಾಹನಗಳ ಉತ್ಪಾದನಾ ಘಟಕವನ್ನು 2021ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಮುಚ್ಚಲಾಗುತ್ತದೆ ಮತ್ತು ಚೆನ್ನೈನ ಎಂಜಿನ್ ಉತ್ಪಾದನಾ ಘಟಕವನ್ನು 2022ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಸ್ಥಗಿತಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ. ಇದನ್ನೂ ಓದಿ: ಮಹೀಂದ್ರಾ ಎಕ್ಸ್‌ಯುವಿ700 ಬಿಡುಗಡೆ- ಬೆಲೆ ಎಷ್ಟು? ವಿಶೇಷತೆ ಏನಿದೆ? 

2017ರಲ್ಲಿ ಅಮೆರಿಕದ ವಾಹನ ದಿಗ್ಗಜ ಜನರಲ್ ಮೋಟಾರ್ಸ್ ಭಾರತದಲ್ಲಿನ ತನ್ನ ಕಾರು ಮಾರಾಟವನ್ನು ಸ್ಥಗಿತಗೊಳಿಸಿತ್ತು ಮತ್ತು ಅಮೆರಿಕದ ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಕಂಪನಿಯು ಕೂಡ ಭಾರತದ ಮಾರುಕಟ್ಟೆಗೆ 2020ರಲ್ಲಿ ಗುಡ್‌ ಬೈ ಹೇಳಿತ್ತು. ಇದನ್ನೂ ಓದಿ: ಬಹು ನಿರೀಕ್ಷಿತ ಸ್ಕೋಡಾ ಕುಶಾಕ್ ಕಾರು ಬಿಡುಗಡೆ

Comments

Leave a Reply

Your email address will not be published. Required fields are marked *