ರಾಜ್ಯದ 2 ಕಡೆಗಳಲ್ಲಿ ತುಪ್ಪ ಸೇಫ್ ಅಲ್ಲ – ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ

– ಬೆಂಗ್ಳೂರು, ಬಾಗಲಕೋಟೆಯ 2 ತುಪ್ಪ ತಯಾರಿಕಾ ಘಟಕಕ್ಕೆ ನೋಟಿಸ್

ಬೆಂಗಳೂರು: ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾದ ತುಪ್ಪ (Ghee) ಕಲಬೆರಕೆ ವಿವಾದ ಬೆಳಕಿಗೆ ಬರುವುದಕ್ಕೂ ಮುನ್ನವೇ ರಾಜ್ಯದಲ್ಲಿ ತುಪ್ಪ ಕಲಬೆರಕೆ ಆಗಿರುವುದು ಬೆಳಕಿಗೆ ಬಂದಿದೆ. ಆಹಾರ ಸುರಕ್ಷತಾ ಇಲಾಖೆ 40 ಕಡೆ ತುಪ್ಪ ಸಂಗ್ರಹ ಮಾಡಿ ಟೆಸ್ಟ್ ಮಾಡಿದಾಗ ರಾಜ್ಯದ 2 ಕಡೆ ತುಪ್ಪ ಕಲಬೆರಕೆ ಆಗಿರುವುದು ಬಯಲಾಗಿದೆ.

ಆಹಾರ ಮತ್ತು ಸುರಕ್ಷತಾ ಇಲಾಖೆ ಆಗಸ್ಟ್ ತಿಂಗಳಲ್ಲಿ ತುಪ್ಪವನ್ನ ಟೆಸ್ಟ್ ಮಾಡಿದೆ. ರಾಜ್ಯಾದ್ಯಂತ 40 ಕಡೆ ಮಾದರಿ ಸಂಗ್ರಹಿಸಿ, ಬೆಂಗಳೂರು (Bengaluru) ಮತ್ತು ಬಾಗಲಕೋಟೆಯಲ್ಲಿ (Bagalkot) ತುಪ್ಪ ಸೇಫ್ ಅಲ್ಲ ಎಂದು ವರದಿ ನೀಡಿದೆ.

ಎಲ್ಲಿಯ ತುಪ್ಪ ಸೇಫ್‌ ಅಲ್ಲ ಎಂಬ ವರದಿ ಬಂದಿರುವ ಕಡೆ ತುಪ್ಪ ತಯಾರಿಕಾ ಘಟಕಕ್ಕೆ ಆಹಾರ ಮತ್ತು ಸುರಕ್ಷತಾ ಇಲಾಖೆ ನೋಟಿಸ್ ನೀಡಿದೆ. 30 ದಿನಗಳ ಒಳಗೆ ತುಪ್ಪ ಅಸುರಕ್ಷತೆ ಅಲ್ಲ ಎಂದು ಸಾಬೀತುಪಡಿಸಿಕೊಳ್ಳಲು ಇಲಾಖೆ ಸೂಚಿಸಿದೆ. ಈ ಬಗ್ಗೆ ಮೈಸೂರಿನ ಲ್ಯಾಬ್‍ನಲ್ಲಿ ಖಚಿತತೆಯ ಪರೀಕ್ಷೆ ನಡೆಯುತ್ತಿದೆ.

ದೇಶಾದ್ಯಂತ ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾಗಿದೆ ಎನ್ನಲಾದ ಕಲಬೆರಕೆ ತುಪ್ಪ ವಿವಾದ ಸೃಷ್ಟಿಸಿದೆ. ಕಳಪೆ ಗುಣಮಟ್ಟದ ತುಪ್ಪ, ಪ್ರಾಣಿಗಳ ಕೊಬ್ಬು ಇರುವ ಬಗ್ಗೆ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ರಾಜ್ಯದ ನಂದಿನಿ ತುಪ್ಪ ಹೊರತುಪಡಿಸಿ, ಉಳಿದ ತುಪ್ಪಗಳನ್ನು ಟೆಸ್ಟ್ ಮಾಡಲು ಆರೋಗ್ಯ ಸಚಿವರು ಸೂಚಿಸಿದ್ದರು.

ತುಪ್ಪದ ಪರೀಕ್ಷೆ ನಡೆಯೋದು ಹೇಗೆ?
* ತುಪ್ಪವನ್ನ ಒಂದು ಕೆಮಿಕಲ್‍ಗೆ ಅಳವಡಿಸುತ್ತಾರೆ
* ತುಪ್ಪವನ್ನ ಕೆಮಿಕಲ್‍ಗೆ ಹಾಕಿ 7 ದಿನ ಹಾಗೆಯೇ ಇಡುತ್ತಾರೆ
* ಕೆಮಿಕಲ್‍ಗೆ ಹಾಕಿದ ತುಪ್ಪ ಮೂರು ಬಣ್ಣಗಳಾಗಿ ಬದಲಾಗುತ್ತೆ
* ಕೆಂಪು, ಹಳದಿ, ಬಿಳಿ ಬಣ್ಣ ಬಂದರೆ ಅನ್‍ಸೇಫ್
* ಫ್ಯಾಟ್ ಪ್ರಮಾಣ 90% ದಾಟಿದ್ರೆ ಅನ್‍ಸೇಫ್
* ಎರಡು ಪ್ರದೇಶಗಳ ತುಪ್ಪದ ಫ್ಯಾಟ್ 90% ದಾಟಿದೆ