ಭಾರತ ಕೊಟ್ಟ ಶಾಕ್‌ಗೆ ತತ್ತರ – ನೆರೆ ತುರ್ತು ಪರಿಸ್ಥಿತಿ ಘೋಷಿಸಿದ ಪಾಕ್‌

– ಝಿಲಂ ನದಿಯಲ್ಲಿ ಭಾರೀ ಪ್ರವಾಹ
– ಸಿಂಧೂ ನದಿಯ ಒಪ್ಪಂದವನ್ನು ಅಮಾನತಿನಲ್ಲಿಟ್ಟ ಭಾರತ

ಇಸ್ಲಾಮಾಬಾದ್‌: ನೀರು (Water) ಹರಿಯುವುದನ್ನು ನಿಲ್ಲಿಸಿದರೆ ನಾವು ಭಾರತದಲ್ಲಿ (India) ರಕ್ತದ ನದಿಯನ್ನು ಹರಿಸುತ್ತೇವೆ ಎಂದಿದ್ದ ಪಾಕಿಸ್ತಾನದಲ್ಲಿ (Pakistan) ಈಗ ದಿಢೀರ್‌ ಪ್ರವಾಹ ಉಂಟಾಗಿದೆ.

ಭಾರತ ಉರಿ ಜಲಾಶಯದಿಂದ (Uri Dam) ಝಿಲಂ ನದಿಗೆ (Jhelum River) ಭಾರೀ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಿದ್ದರಿಂದ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ (PoK) ಮುಜಾಫರಾಬಾದ್‌ನಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹದ ಬೆನ್ನಲ್ಲೇ ನದಿ ದಂಡೆಯಲ್ಲಿ ವಾಸಿಸುವ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗಿದೆ.

ಯಾವುದೇ ಪೂರ್ವಸೂಚನೆ ನೀಡದೇ ಭಾರತ ಏಕಾಏಕಿ ನದಿಗೆ ನೀರನ್ನು ಹರಿಸಿದೆ ಎಂದು ಪಾಕ್‌ ಮಾಧ್ಯಮಗಳು ಭಾರತದ ವಿರುದ್ಧ ಆರೋಪ ಮಾಡಿದೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿ ಬೆಂಬಲಿಸಿ ಪೋಸ್ಟ್‌ – ಶಾಸಕ, ಶಿಕ್ಷಕ, ವಕೀಲ ಸೇರಿ 19 ಮಂದಿ ಅರೆಸ್ಟ್‌

ಝೀಲಂ ನದಿಯ ದಡದಲ್ಲಿರುವ ಮುಜಫರಾಬಾದ್‌ನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಹಟ್ಟಿಯನ್ ಬಾಲಾದಲ್ಲಿ ಸ್ಥಳೀಯ ಆಡಳಿತವು ನೆರೆಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಕಟಣೆ ಹೊರಡಿಸಲಾಗಿದ್ದು ನದಿಗೆ ಇಳಿಯದಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಿದೆ. ಈ ಪ್ರಕಟಣೆಯಿಂದ ನದಿ ದಂಡೆಗಳ ಬಳಿ ವಾಸಿಸುವ ನಿವಾಸಿಗಳಲ್ಲಿ ಭೀತಿಯನ್ನು ಸೃಷ್ಟಿಸಿದೆ ಎಂದು ವರದಿ ಮಾಡಿವೆ.  ಇದನ್ನೂ ಓದಿ: ಜಮ್ಮು ಕಾಶ್ಮೀರ | ಉಗ್ರರ ಗುಂಡೇಟಿಗೆ ಸಾಮಾಜಿಕ ಕಾರ್ಯಕರ್ತ ಬಲಿ

ಕಾಶ್ಮೀರದ ಅನಂತನಾಗ್‌ನಿಂದ ನೀರು ಪ್ರವೇಶಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಚಕೋತಿ ಪ್ರದೇಶದ ನೀರಿನ ಮಟ್ಟ ದಿಢೀರ್‌ ಏರಿಕೆಯಾಗಿದೆ. ಪಾಕಿಸ್ತಾನದ ಅಧಿಕಾರಿಗಳು ಈ ನಿರ್ಧಾರವನ್ನು ಖಂಡಿಸಿದ್ದು ಇದು ಅಂತರರಾಷ್ಟ್ರೀಯ ನಿಯಮಗಳು ಮತ್ತು ನೀರಿನ ಒಪ್ಪಂದಗಳ ಸಂಪೂರ್ಣ ಉಲ್ಲಂಘನೆ ಎಂದು ಹೇಳಿದ್ದಾರೆ.

ನೀರು ರಭಸವಾಗಿ ಹರಿಯಲು ಆರಂಭಿಸಿತ್ತು. ನಾವು ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಈಗ ಹೆಣಗಾಡುತ್ತಿದ್ದೇವೆ ಎಂದು ಪಾಕ್‌ ಆಕ್ರಮಿತ ಕಾಶ್ಮೀರದ ನದಿ ದಂಡೆಯಲ್ಲಿರುವ ಡುಮೆಲ್ ಎಂಬ ಹಳ್ಳಿಯ ನಿವಾಸಿ ಹೇಳಿದ್ದಾರೆ

ಭಾರತವು ಉದ್ದೇಶಪೂರ್ವಕ ‘ಜಲ ಭಯೋತ್ಪಾದನೆಯಲ್ಲಿ’ ತೊಡಗಿದೆ ಎಂದು ಪಿಒಕೆ ಸರ್ಕಾರ ಆರೋಪಿಸಿದೆ. ಹಟ್ಟಿಯನ್ ಬಾಲಾದಲ್ಲಿ ಆಡಳಿತವು ತಾತ್ಕಾಲಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಾವು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ. ಆದರೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆಸಿದ ಬಳಿಕ ಭಾರತ ಸಿಂಧೂ ನದಿ ಒಪ್ಪಂದವನ್ನು ಅಮಾನತಿನಲ್ಲಿಟ್ಟಿದೆ. ಒಪ್ಪಂದವನ್ನು ಅಮಾನತಿನಲ್ಲಿಟ್ಟ ಕಾರಣ ಭಾರತ ಯಾವಾಗ ಬೇಕಾದರೂ ಪಾಕಿಸ್ತಾನಕ್ಕೆ ಮಾಹಿತಿ ನೀಡದೇ ನೀರನ್ನು ಹರಿಸಬಹುದಾಗಿದೆ. ಉರಿ ಜಲಾಶಯದಿಂದ ನೀರನ್ನು ಹರಿಸಿದ ಬಗ್ಗೆ ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.