ಒಂದ್ಕಡೆ ಜನರಿಲ್ಲ, ಇನ್ನೊಂದ್ಕಡೆ ಸ್ಟೇಡಿಯಂನಲ್ಲಿ ಲೈಟೇ ಇಲ್ಲ- ನಗೆಪಾಟಲಿಗೀಡಾದ ಪಾಕ್

ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿಯಲ್ಲಿ 10 ವರ್ಷದ ಬಳಿಕ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ ಸೋಮವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಒಂದೆಡೆ ಪಂದ್ಯ ವೀಕ್ಷಣೆಗೆ ಜನರಿರಲಿಲ್ಲ, ಇನ್ನೊಂದೆಡೆ ಕ್ರೀಡಾಂಗಣದಲ್ಲಿದ್ದ ಲೈಟ್ಸ್ ಗಳು ಕೂಡ ಕೈಕೊಟ್ಟ ಕಾರಣ ಪಾಕಿಸ್ತಾನ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

ಹೌದು, ಭದ್ರತಾ ಕಳವಳದ ನಡುವೆ ಕ್ರಿಕೆಟ್ ಆಯೋಜಿಸುವ ಮೂಲಕ ವಿಶ್ವಕ್ಕೆ ಸ್ಪಷ್ಟ ಸಂದೇಶ ರವಾನಿಸಲು ಪಾಕಿಸ್ತಾನ ಹೊರಟಿದೆ. ಆದರೆ ಪಾಕಿಸ್ತಾನದ ಮೊದಲ ಪ್ರಯತ್ನಕ್ಕೆ ಭಾರೀ ಹಿನ್ನಡೆ ಎದುರಾಗಿದೆ. ಕರಾಚಿಯಲ್ಲಿ ಸೋಮವಾರ ನಡೆದ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯವನ್ನು ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಜನರಿಲ್ಲದೆ ಸ್ಟೇಡಿಯಂ ಬಿಕೋ ಎನ್ನುತ್ತಿತ್ತು. ಅಷ್ಟೇ ಅಲ್ಲದೆ ಹೊನಲು ಬೆಳಕಿನ ಪಂದ್ಯದ ನಡುವೆ ಎರಡನೇ ಬಾರಿ ಕ್ರೀಡಾಂಗಣದ ಫ್ಲಡ್‍ಲೈಟ್ಸ್ ಆಫ್ ಆಗಿ ಪಂದ್ಯಕ್ಕೆ ಅಡಚಣೆ ಉಂಟಾಯಿತು.

ಈ ಕಾರಣಗಳಿಗೆ ಈಗ ಪಾಕಿಸ್ತಾನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ಬಹುವರ್ಷದ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿರುವ ಪಾಕಿಸ್ತಾನದ ಮೇಲೆ ಅಲ್ಲಿನ ಪ್ರಜೆಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಪಾಕಿಸ್ತಾನ ಚೆನ್ನಾಗಿ ಪಂದ್ಯ ನಡೆಸಿ ಯಶಸ್ವಿಯಾಗಿ ಟೀಕೆಗಳಿಗೆ ಬ್ರೇಕ್ ಹಾಕುತ್ತೆ ಎಂದುಕೊಂಡಿದ್ದರು. ಆದರೆ ಕ್ರೀಡಾಂಗಣ ನಿರ್ವಹಣಾ ಮಂಡಳಿ ನಿರ್ಲಕ್ಷ್ಯ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿರ್ಲಕ್ಷ್ಯ ಹಾಗೂ ಸರಿಯಾಗಿ ವಿದ್ಯುತ್ ಪಾವತಿಸದ ಕಾರಣಕ್ಕೆ ಈ ಲೈಟ್ಸ್ ಗಳು ಆಫ್ ಆಗಿದೆ. ಸರಿಯಾಗಿ ಕೆಲಸ ಮಾಡದೇ ದೇಶದ ಮರ್ಯಾದೆ ಕಳೆಯುತ್ತಿದ್ದೀರ ಎಂದು ಪಾಕ್ ಕ್ರಿಕೆಟ್ ಅಭಿಮಾನಿಗಳು ಸಿಡಿದೆದ್ದಿದ್ದಾರೆ.

ಹಾಗೆಯೇ ಪಂದ್ಯದ ಮಧ್ಯೆ ಫ್ಲಡ್‍ಲೈಟ್ಸ್ ಕೈಕೊಟ್ಟ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಪಾಕಿಸ್ತಾನವನ್ನು ಟ್ರೋಲ್ ಆಗುತ್ತಿದೆ. ಬೇರೆ ದೇಶದ ಆಂತರಿಕ ವಿಚಾರದಲ್ಲಿ ಮೂಗುತೂರಿಸುವ ಬದಲು ನಿಮ್ಮ ದೇಶದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಿ ಎಂದು ನೆಟ್ಟಿಗರು ಪಾಕಿಸ್ತಾನವನ್ನು ಗೇಲಿ ಮಾಡುತ್ತಿದ್ದಾರೆ. ಮೊದಲು ವಿದ್ಯುತ್ ಬಿಲ್ ಕಟ್ಟಿ ಆಮೇಲೆ ಪಂದ್ಯ ಆಯೋಜಿಸಿ ಎಂದು ಟೀಕಿಸುತ್ತಿದ್ದಾರೆ. ನೀವು ಓಡಿಐ ಆಯೋಜಿಸಿಲ್ಲ, ಗಲ್ಲಿ ಕ್ರಿಕೆಟ್ ಆಡಿಸುತ್ತಿದ್ದೀರ ಎಂದು ಕಾಲೆಳೆದಿದ್ದಾರೆ.

ಹಾಗೆಯೇ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಶ್ರೀಲಂಕಾ ನಿರ್ಧರಿಸಿ, ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಿಗೆ ಹೊಸ ನಾಯಕರುಗಳನ್ನೇ ಹೆಸರಿಸಿತ್ತು. ಜೊತೆಗೆ ಮೈದಾನಕ್ಕೆ ತೆರಳುವಾಗ, ಆಟಗಾರರು ತಂಗುವ ಹೋಟೆಲ್ ಕೊಠಡಿ ಸೇರಿದಂತೆ ಕರಾಚಿ ನಗರದ್ಯಾಂತ ಶ್ರೀಲಂಕಾ ತಂಡಕ್ಕೆ ಬಿಗಿ ಭದ್ರತೆಯನ್ನು ನೀಡಲಾಗುತ್ತಿದೆ.

ಈ ಮೊದಲು ಕರಾಚಿಯಲ್ಲಿ ನಡೆಯಬೇಕಾಗಿದ್ದ ಪ್ರಥಮ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. 2009ರಲ್ಲಿ ಲಾಹೋರ್ ನಲ್ಲಿ ಶ್ರೀಲಂಕಾದ ಬಸ್ ಮೇಲೆ ದಾಳಿ ನಡೆದ ಬಳಿಕ ಇದೇ ಮೊದಲ ಬಾರಿಗೆ ಕರಾಚಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ.

ಸದ್ಯ ಸೋಮವಾರದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ 67 ರನ್‍ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಪಾಕಿಸ್ತಾನ 305 ರನ್ ಗಳಿಸಿದ್ದರೆ, ಶ್ರೀಲಂಕಾ 238 ರನ್‍ಗೆ  ಸರ್ವಪತನಗೊಂಡು ಸೋಲನ್ನು ಒಪ್ಪಿಕೊಂಡಿತು.

ಹೀಗಾಗಿ ಶ್ರೀಲಂಕಾ ಪಂದ್ಯದಲ್ಲಿ ಸೋಲಲು ಕ್ರೀಡಾಂಗಣದ ಲೈಟ್ಸ್ ಆಫ್ ಆಗಿ ಅಡಚಣೆಯಾಗಿದ್ದೇ ಕಾರಣ. ಇಲ್ಲದಿದ್ದರೆ ಶೆಹನ್ ಜಯಸೂರ್ಯ 96 ರನ್‍ಗಳ ಬದಲು ಶತಕ ಬಾರಿಸುತ್ತಿದ್ದರು ಎಂದು ಶ್ರೀಲಂಕಾ ಅಭಿಮಾನಿಗಳು ಪಾಕ್ ವಿರುದ್ಧ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *