ತುಂಗಭದ್ರಾ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ-ನೂರಾರು ಎಕರೆಯಲ್ಲಿದ್ದ ಬೆಳೆ ನೀರುಪಾಲು

ರಾಯಚೂರು: ಜಲಾಶಯಗಳಿಂದ ಭಾರೀ ಪ್ರಮಾಣದ ನೀರು ಬಿಡುತ್ತಿರುವದರಿಂದ ತುಂಗಭದ್ರಾ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ನೂರಾರು ಎಕರೆಯಲ್ಲಿದ್ದ ಬೆಳೆ ನೀರುಪಾಲಾಗಿದ್ದು ಕೋಟ್ಯಂತರ ರೂಪಾಯಿ ನಷ್ಟವಾಗಿದೆ. 2009ರ ಬಳಿಕ ರಾಯಚೂರಿನಲ್ಲಿ ಕೃಷ್ಣಾ, ತುಂಗಭದ್ರಾ ನದಿಗಳು ಮೈದುಂಬಿ ಹರೀತಿವೆ. ತುಂಗಭದ್ರಾ ಡ್ಯಾಂನಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ.

ಮಾನ್ವಿ ತಾಲೂಕಿನ ರಾಜೊಳ್ಳಿ ಬಂಡ ತಿರುವು ಜಲಾಶಯ ಸಂಪೂರ್ಣ ತುಂಬಿದ್ದು ಹೆಚ್ಚುವರಿ ನೀರು ಆಂಧ್ರಪ್ರದೇಶಕ್ಕೆ ಹರಿದು ಹೋಗುತ್ತಿದೆ. ನೀರಿನ ಪ್ರಮಾಣ ಹೆಚ್ಚಾದಲ್ಲಿ ಜಲಾಶಯದ ಗೇಟ್ ಹಾಗೂ ಗೋಡೆ ಅಪಾಯಕ್ಕೊಳಗಾಗುವ ಸಾಧ್ಯತೆ ಇದೆ. ತುಂಗಭದ್ರಾ ನದಿಯ ಪ್ರವಾಹ ಭೀತಿ ರಾಯಚೂರು ಜಿಲ್ಲೆಯ ದೇವಾಲಯಗಳಿಗೂ ತಟ್ಟಿದೆ. ಎಲೆಬಿಚ್ಚಾಲಿ ಗ್ರಾಮದ ಗುರುರಾಘವೇಂದ್ರ ಸ್ವಾಮಿ ಏಕಶಿಲಾ ಬೃಂದಾವನ ಸಂಪೂರ್ಣ ಜಲಾವೃತವಾಗಿದೆ. ರಾಯರ ಮಠದ ಬಳಿಯ ಸ್ನಾನಘಟ್ಟದ ಮೆಟ್ಟಿಲುಗಳು ಕೂಡ ಮುಳುಗಡೆಯಾಗಿದ್ದು, ಮಠದ ಆವರಣದಲ್ಲಿನ ವ್ಯಾಪಾರಿಗಳು ಪ್ರವಾಹ ಭೀತಿಯಲ್ಲಿದ್ದಾರೆ.

ತುಂಗಭದ್ರಾ ನದಿಯಲ್ಲಿ ನೀರು ಹೆಚ್ಚಾಗಿರುವುದರಿಂದ ಸಿಂಧನೂರು, ಮಾನ್ವಿ ಸೇರಿದಂತೆ ನದಿ ಪಾತ್ರದ ಗ್ರಾಮಗಳ ಜಮೀನಿಗೆ ನೀರು ನುಗ್ಗಿ, ಕೋಟ್ಯಂತರ ರೂಪಾಯಿ ಮೌಲ್ಯದ ಭತ್ತ ಹಾಗೂ ಹತ್ತಿ ಬೆಳೆ ಹಾನಿಯಾಗಿವೆ. ಪಂಪಸೆಟ್‍ಗಳು ಮುಳುಗಡೆಯಾಗಿವೆ. ಹೆಚ್ಚಿನ ಪ್ರಮಾಣದ ನೀರು ನದಿಗೆ ಬಿಟ್ಟಲ್ಲಿ ನದಿಪಾತ್ರದ ಗ್ರಾಮಗಳಿಗೂ ಅಪಾಯ ಕಾದಿದೆ.

ರಾಯಚೂರಿನಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ಎರಡೂ ನದಿಗಳು ತುಂಬಿ ಹರೀತಿದ್ದರೂ ಮುಂಗಾರು ಮಳೆ ಬಾರದೇ ಬರಗಾಲ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕೃಷಿ ಸಚಿವ ಎನ್.ಹೆಚ್.ಶಿವಶಂಕರ್ ರೆಡ್ಡಿ ಇಂದು ವಿಜಯನಗರ ಕ್ಯಾಂಪ್ ಹಾಗೂ ಸುಲ್ತಾನಪುರ ಭಾಗದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

Comments

Leave a Reply

Your email address will not be published. Required fields are marked *