ಮಳೆಯ ರೌದ್ರಾವತಾರಕ್ಕೆ ಗ್ರಾಮವೇ ಕೆರೆಯಾಯ್ತು

ರಾಯಚೂರು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯು ಸಾಕಷ್ಟು ಅವಾಂತರ ಸೃಷ್ಟಿಸಿದೆ. ಸಿಂಧನೂರು ತಾಲೂಕಿನ ಸಾಲಗುಂದದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಇಡೀ ಗ್ರಾಮದಲ್ಲಿ ನೀರು ಮೊಣಕಾಲುವರೆಗೂ ರಭಸವಾಗಿ ಹರಿಯುತ್ತಿದ್ದು, ಇಡೀ ಗ್ರಾಮ ಕೆರೆಯಾಗಿ ಮಾರ್ಪಾಡಾಗಿದೆ.

ಗ್ರಾಮದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮಸ್ಥರು ರಾತ್ರಿ ಇಡೀ ಜಾಗರಣೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಇಷ್ಟೆಲ್ಲಾ ಅವಾಂತರಗಳಾಗಿದ್ದರೂ ಸರ್ಕಾರ ಕಣ್ತೆರೆಯದೇ ಇರೋದಕ್ಕೆ ಜನರು ಆಕ್ರೋಶವನ್ನ ಹೊರಹಾಕಿದ್ದಾರೆ. ಭೀಕರ ಪ್ರವಾಕ್ಕೂ ಪರಿಹಾರ ನೀಡದ ಸರ್ಕಾರ ನಮಗೇನು ಪರಿಹಾರ ನೀಡುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ಅಕ್ಕಿ, ಜೋಳ ನಮ್ಮಲ್ಲಿವೆ, ನೀವೇನು ಕೊಡಬೇಡಿ ಎಂದು ಸರ್ಕಾರದ ಕಿವಿ ಹಿಂಡಿದ್ದಾರೆ.

ಮತ್ತೊಂದೆಡೆ ರಾಯಚೂರಿನ ಯಾಪಲದಿನ್ನಿ ಸೋಲಾರ್ ಪ್ಲ್ಯಾಂಟ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯುತ್ ಘಟಕದಿಂದ ಹೊರಬರುವ ನೀರೆಲ್ಲಾ ರೈತರ ಜಮೀನಿಗೆ ನುಗ್ಗಿ ಹತ್ತಿ ಬೆಳೆ ನಾಶವಾಗಿದೆ. ಮಾನ್ವಿ ತಾಲೂಕಿನ ಉಟಕನೂರು ದೋತರಬಂಡಿ ಮಧ್ಯದ ಹಳ್ಳ ತುಂಬಿ ಹರಿಯುತ್ತಿದ್ದು, ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ತೆರೆಳಲು ಪರದಾಡುತ್ತಿದ್ದಾರೆ. ಇದರಿಂದ ಪರೀಕ್ಷೆಗಳಿದ್ದರೂ ಶಾಲೆಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಹಳ್ಳದ ಪಕ್ಕದ ಜಮೀನುಗಳಿಗೂ ನೀರು ನುಗ್ಗಿ ನೂರಾರು ಎಕ್ರೆ ಬೆಳೆ ಹಾನಿಯಾಗಿದೆ.

Comments

Leave a Reply

Your email address will not be published. Required fields are marked *