ನೆಲೆಸಿದ್ದ ಕೇಂದ್ರವನ್ನು ಸ್ವಚ್ಛಗೊಳಿಸಿ ತೆರಳಿದ ಕೇರಳ ಸಂತ್ರಸ್ತರು- ಫೋಟೋ ವೈರಲ್

ತಿರುವನಂತಪುರ: ನಿರಾಶ್ರಿತ ಕೇಂದ್ರಗಳಲ್ಲಿ ತಂಗಿದ್ದ ಸಂತ್ರಸ್ತರು ತಾವು ತೆರಳುವ ಮುನ್ನ ಸಂಪೂರ್ಣ ಕೊಠಡಿಯನ್ನು ಸ್ವಚ್ಛಮಾಡಿ ಹೋಗುವ ಮೂಲಕ ಭಾರೀ ಪ್ರಂಶಸೆಗೆ ಪಾತ್ರರಾಗಿದ್ದಾರೆ.

ಮಹಾಮಳೆಗೆ ತತ್ತರಿಸಿದ್ದ ಹೋಗಿದ್ದ ಕೇರಳ ರಾಜ್ಯದಲ್ಲಿ ಸಾವಿರಾರು ಮಂದಿ ನಿರಾಶ್ರಿತರಾಗಿ ಹೋಗಿದ್ದರೆ, ಸುಮಾರು 370 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ನಿರಾಶ್ರಿತರಾಗಿದ್ದ ಜನರನ್ನು ಹತ್ತಿರದ ಆಸ್ಪತ್ರೆ, ಶಾಲಾ-ಕಾಲೇಜುಗಳನ್ನು ತಂಗಲು ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಸದ್ಯ ರಾಜ್ಯದಲ್ಲಿ ಮಳೆ ಪ್ರಮಾಣ ತಗ್ಗಿದ್ದು, ನಿರಾಶ್ರಿತರು ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ತಾವು ತೆರಳುವ ಮುನ್ನ ತಾವು ತಂಗಿದ್ದ ಶಾಲಾ ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿಹೋಗುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ.

ಎರ್ನಾಕುಲಂ ಜಿಲ್ಲೆಯ ಕೂನಮ್ಮಾವು ಪ್ರದೇಶದಲ್ಲಿ ಕೊಂಗೊರ್ಪಿಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಂಗಿದ್ದ ನಿರಾಶ್ರಿತರು, ತೆರಳುವ ಮುನ್ನ ತಾವು ತಂಗಿದ್ದ 4ನೇ ಮಹಡಿಯ ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿ ಹೋಗಿದ್ದಾರೆ.

ಯಾಕೆ ಸ್ವಚ್ಛ ಮಾಡುತ್ತಿದ್ದೀರಿ ಎಂದು ಶಾಲಾ ಸಿಬ್ಬಂದಿ ಪ್ರಶ್ನಿಸಿದ್ದಕ್ಕೆ ಸಂತ್ರಸ್ತ ಮಹಿಳೆಯೊಬ್ಬರು, ಇದು ಕಳೆದ ನಾಲ್ಕು ದಿನಗಳಿಂದ ನಮ್ಮೆಲ್ಲರ ಮನೆಯಾಗಿತ್ತು. ಇಲ್ಲಿ ಸುಮಾರು 1,200 ಮಂದಿ ಆಶ್ರಯ ಪಡೆದುಕೊಂಡಿದ್ದೆವು. ಹೀಗಾಗಿ ಇದನ್ನು ಗಲೀಜು ಮಾಡಿ, ಹಾಗೆ ಬಿಟ್ಟು ಹೋಗಲು ಮನಸ್ಸು ಬರುತ್ತಿಲ್ಲ. ನಮ್ಮ ಮನೆಯಾಗಿದ್ದರೆ ನಾವು ಹೀಗೆ ಗಲೀಜಾಗಿರುವಂತೆ ನೋಡಿಕೊಳ್ಳುತ್ತೇವಾ? ಹೀಗಾಗಿ ಸ್ವಚ್ಛ ಮಾಡುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.

ಸಂತ್ರಸ್ತ ಕೇಂದ್ರದಿಂದ ಹೊರಬರುತ್ತಿರುವ ಕೊನೆಯ ವ್ಯಕ್ತಿ ತೆಗೆದ ಕೊಠಡಿಯ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ಹಿಂದೆ ಫಿಫಾ ವಿಶ್ವಕಪ್ ಫುಟ್‍ಬಾಲ್ ಪಂದ್ಯದಲ್ಲಿ 16ರ ಗುಂಪು ವಿಭಾಗದಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದ ವೇಳೆ ಜಪಾನ್ ತಂಡ ತಾವು ತಂಗಿದ್ದ ಕೊಠಡಿಯನ್ನು ಸ್ವಚ್ಛಗೊಳಿಸಿ ತೆರಳಿತ್ತು. ಸ್ವಚ್ಛಗೊಳಿಸಿದ ಕೊಠಡಿಯ ಫೋಟೋಗಳು ವೈರಲ್ ಆಗಿತ್ತು

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *