ಮಂಗಳೂರು ರಸ್ತೆ ಸಂಚಾರ ಬಂದ್- ವಿಮಾನ ಕಂಪನಿಗಳಿಂದ ಹಗಲು ದರೋಡೆ

ಮಂಗಳೂರು: ಭಾರೀ ವರ್ಷಧಾರೆಗೆ ಜಿಲ್ಲೆಗೆ ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ, ಸಂಪಾಜೆ ಘಾಟಿ ರಸ್ತೆಗಳು ಬಂದ್ ಆಗಿವೆ. ಇದರ ಜೊತೆ ಚಾರ್ಮಾಡಿ ರಸ್ತೆಯಲ್ಲೂ ಭಾರೀ ಟ್ರಾಫಿಕ್ ಜಾಮ್ ಆಗುತ್ತಿರುವ ಕಾರಣ ವಿಮಾನಯಾನ ಕಂಪೆನಿಗಳು ಮಂಗಳೂರು- ಬೆಂಗಳೂರು ಮಧ್ಯೆ ಸಂಚರಿಸುವ ಟಿಕೆಟ್ ದರವನ್ನು ಭಾರೀ ಏರಿಕೆ ಮಾಡಿವೆ.

ಈ ಹಿಂದೆ ಸಾಮಾನ್ಯ ದಿನಗಳಲ್ಲಿ ಮೂರು, ನಾಲ್ಕು ಸಾವಿರ ರೂ. ಟಿಕೆಟ್ ಲಭ್ಯವಿದ್ದರೆ ಸಂದರ್ಭದ ಲಾಭ ಪಡೆದ ಕಂಪೆನಿಗಳು 10 ಸಾವಿರ ರೂ. ಏರಿಕೆ ಮಾಡಿತ್ತು. ಆದರೆ ಪ್ರವಾಹ ಪರಿಸ್ಥಿತಿಯಲ್ಲಿ ಮಾನವೀಯತೆ ತೋರಬೇಕಿದ್ದ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಂದ ಹಗಲು ದರೋಡೆ ಮಾಡುತ್ತಿದ್ದಾರೆ.

ಈಗ ಎಷ್ಟಿವೆ?
ಮೊದಲು ಸಾಮಾನ್ಯವಾಗಿ ಮಂಗಳೂರಿನಿಂದ-ಬೆಂಗಳೂರಿಗೆ 1,500 ರಿಂದ 5,000 ಪ್ರಯಾಣ ದರ ಇತ್ತು. ಆದರೆ ಇದೀಗ ಪ್ರೀಮಿಯರ್ ಕ್ಲಾಸ್ ಪ್ರಯಾಣಕ್ಕೆ ಪ್ರತಿಯೊಬ್ಬ ಪ್ರಯಾಣಿಕನಿಂದ 68 ಸಾವಿರ ಹಾಗೂ ಸಾಮಾನ್ಯ ದರ್ಜೆಯ ಪ್ರಯಾಣಕ್ಕೆ 32 ಸಾವಿರ ರೂಪಾಯಿಗಳನ್ನು ನಿಗದಿಪಡಿಸಿವೆ.

ಪ್ರವಾಹ ಪರಿಸ್ಥಿತಿಯಿಂದಾಗಿ ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚಿನ ದರ ನೀಡಿ ಪ್ರಯಾಣಿಸುತ್ತಿದ್ದಾರೆ. ಪ್ರವಾಹ ಪರಿಸ್ಥಿತಿಯಲ್ಲಿಯೂ ವಿಮಾನಯಾನ ಕಂಪೆನಿಗಳು ಹಗಲು ದರೋಡೆ ನಡೆಸುತ್ತಿದ್ದು, ಈ ಕೂಡಲೇ ಕೇಂದ್ರ ವಿಮಾನಯಾನ ಇಲಾಖೆಯು ಇತ್ತ ಗಮನ ನೀಡಿ ವಿಮಾನಯಾನ ಕಂಪೆನಿಗಳ ಮೇಲೆ ನಿಗಾವಹಿಸಬೇಕೆಂದು ಪ್ರಯಾಣಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭುರವರು, ಪ್ರವಾಹ ಪೀಡಿತ ಪ್ರದೇಶಗಳಾದ ಕೇರಳ ಹಾಗೂ ಮಂಗಳೂರು ಮತ್ತು ಸಮೀಪದ ವಿಮಾನ ನಿಲ್ದಾಣಗಳ ಮಾರ್ಗದಲ್ಲಿ ಹಾರಾಟ ಮಾಡುವ ವಿಮಾನಯಾನ ಪ್ರಯಾಣ ದರಗಳು ಯಾವುದೇ ಕಾರಣಕ್ಕೂ ಹೆಚ್ಚಿಸಬಾರದು ಎಂದು ಆದೇಶ ನೀಡಿದ್ದಾರೆ.

ಅಲ್ಲದೇ ಇನ್ನು ಮುಂದೆ ತಿರುವನಂತಪುರಂ, ಕ್ಯಾಲಿಕಟ್, ಕೊಯಮತ್ತೂರು ಮತ್ತು ಮಂಗಳೂರಿನಿಂದ ಹೋಗುವ ಮತ್ತು ಬರುವ ವಿಮಾನಗಳ 32 ಮಾರ್ಗಗಳ ವಿಮಾನ ಹಾರಾಟದ ಪ್ರಯಾಣ ದರವನ್ನು ಖುದ್ದು ಡಿಜಿಸಿಎ ನಿರಂತರವಾಗಿ ಪರಿಶೀಲಿಸುತ್ತದೆ. ಪ್ರವಾಹ ಪರಿಸ್ಥಿತಿಯಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರೂ ಕಂಪೆನಿಗಳು ಆದೇಶಕ್ಕೆ ಬೆಲೆ ನೀಡದೇ ಇಷ್ಟಬಂದ ದರವನ್ನು ವಿಧಿಸುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *