ಕೃಷ್ಣೆಯ ಅಬ್ಬರಕ್ಕೆ ಚಿಕ್ಕೋಡಿಯ ಹಲವು ಸೇತುವೆ ಜಲಾವೃತ – ಕೊಳ್ಳೇಗಾಲದ ಹಲವು ಗ್ರಾಮ ಮುಳುಗಡೆ

ಚಾಮರಾಜನಗರ/ಚಿಕ್ಕೋಡಿ: ಮಹಾರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕೋಡಿ ತಾಲೂಕಿನ 12 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ 6 ಸೇತುವೆಗಳು ಜಲಾವೃತಗೊಂಡಿವೆ. 1 ಲಕ್ಷದ 38 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, 1 ಲಕ್ಷ 29 ಸಾವಿರ ಕ್ಯೂಸೆಕ್ ನೀರನ್ನ ಹಿಪ್ಪರಗಿ ಜಲಾಶಯದ ಮೂಲಕ ಹರಿದು ಬಿಡಲಾಗುತ್ತಿದೆ.

ಕೃಷ್ಣಾ ನದಿ ಹಾಗೂ ಅದರ ಉಪನದಿಗಳಾದ ವೇದಗಂಗಾ ಹಾಗೂ ದೂದಗಂಗಾ ನದಿಗಳು ತನ್ನ ಪಾತ್ರ ಬಿಟ್ಟು ಹರಿಯುತ್ತಿದ್ದು, ಜನರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಕೃಷ್ಣಾ ನದಿ ಪಕ್ಕದಲ್ಲಿರುವ ಕಲ್ಲೋಳ ಗ್ರಾಮದ ದತ್ತ ಮಂದಿರ ಸಂಪೂರ್ಣ ಜಲಾವೃತವಾಗಿದೆ. ಚಿಕ್ಕೋಡಿ ತಾಲೂಕಿನ 6 ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ. ಯಡೂರು- ಕಲ್ಲೋಳ- ಭೀವಶಿ ಜತ್ರಾಟ್ ಸೇರಿ 6 ಸೇತುವೆ ಮುಳುಗಡೆಯಾಗಿವೆ. 6 ದೇವಸ್ಥಾನಗಳು ಸಹ ನದಿ ನೀರಿನಿಂದ ಜಲಾವೃತವಾಗಿವೆ.

ಕೆಆರ್ ಎಸ್ ನಿಂದ ಅಧಿಕ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದ ಗ್ರಾಮಗಳು ಮುಳುಗಡೆಯಾಗಿವೆ. ನದಿ ಪಾತ್ರದಲ್ಲಿರುವ ಹಂಪಾಪುರ, ಮುಳ್ಳುರು, ದಾಸನಪುರ, ಹರಳೆ, ದನಗೆರೆ, ಯಡಕೂರಿಯ ಸೇರಿದಂತೆ 20 ಕ್ಕೂ ಅಧಿಕ ಗ್ರಾಮಗಳ ಸಾವಿರಾರು ಹೆಕ್ಟೇರ್ ಪ್ರದೇಶದ ಜಮೀನುಗಳು ಮುಳುಗಡೆಯಾಗಿವೆ. ಇದರಿಂದ ಕಬ್ಬು, ತೆಂಗು, ಭತ್ತ, ಬಾಳೆ ಬೆಳೆಗಳು ಸೇರಿದಂತೆ ಇನ್ನಿತರ ಬೆಳೆಗಳು ನಾಶವಾಗಿವೆ. ತೆಪ್ಪದಲ್ಲಿ ಜನ ಓಡಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *