ಬಾವುಟ ತೆರವುಗೊಳಿಸಿ ತ್ರಿವರ್ಣ ಧ್ವಜ ಕಟ್ಟಿಸಿದ ಹಿಂದೂಪರ ಸಂಘಟನೆ ಕಾರ್ಯಕರ್ತರು

ರಾಮನಗರ: ಸೋಷಿಯಲ್ ಮೀಡಿಯಾದಲ್ಲಿ ಕೋಮು ಸೌಹಾರ್ದ ಕದಡುವ ಪೋಸ್ಟ್ ಮಾಡಿದ್ದಾನೆಂದು ವ್ಯಕ್ತಿಯೊಬ್ಬನ ವಿರುದ್ಧ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಂಗಡಿಗಳನ್ನು ಮುಚ್ಚಿಸಿ ಪಟ್ಟಣಾದ್ಯಂತ ಸಿಎಎ ಪರ ಜನಜಾಗೃತಿ ಜಾಥಾ ನಡೆಸಿದ ಘಟನೆ ರಾಮನಗರ ತಾಲೂಕಿನ ಬಿಡದಿಯಲ್ಲಿ ನಡೆದಿದೆ.

ಕೇರಳ ಮೂಲದ ಮಹಮದ್ ಅಬ್ಜಲ್ ತನ್ನ ಫೇಸ್‍ಬುಕ್ ಪೇಜಿನಲ್ಲಿ ಕೆಲವು ಪೋಸ್ಟ್‌ಗಳನ್ನು ಅಪ್ಲೋಡ್ ಮಾಡಿದ್ದಲ್ಲದೇ, ಪಾಕಿಸ್ತಾನದ ಧ್ವಜವನ್ನ ಹೋಲುವ ಬಾವುಟವೊಂದನ್ನು ಸಹ ಪೋಸ್ಟ್ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಆರ್‌ಎಸ್ಎಸ್ ಹಾಗೂ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಅಬ್ಜಲ್‍ನ ಅಂಗಡಿಯ ಮುಂದೆ ಜಮಾಯಿಸಿ ದಬಾಯಿಸಿದ್ದಾರೆ. ಆಗ ಭಯಬೀತನಾದ ಅಬ್ಜಲ್ ನೇರವಾಗಿ ಬಿಡದಿ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆಯ ಮನವಿ ಮಾಡಿದ್ದಾರೆ.

ಕೇರಳ ಮೂಲದ ಮಹಮದ್ ಅಬ್ಜಲ್ ಇಂಡಿಯನ್ ಮುಸ್ಲಿಂ ಲೀಗ್ ಪಕ್ಷದ ಮುಖಂಡನಾಗಿ ಗುರುತಿಸಿಕೊಂಡಿದ್ದರು. ವ್ಯಾಪಾರದ ಹಿನ್ನೆಲೆಯಲ್ಲಿ ರಾಮನಗರದ ಬಿಡದಿಗೆ ಕಳೆದ ಹಲವು ವರ್ಷಗಳ ಹಿಂದೆಯೇ ಬಂದಿರುವ ಅಬ್ಜಲ್ ಐದಾರು ಅಂಗಡಿಗಳನ್ನು ನಡೆಸುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಅಂಗಡಿ ಮೇಲೆ ಕಟ್ಟಿದ್ದ ಮುಸ್ಲಿಂ ಸಂಘಟನೆಯ  ಬಾವುಟ ತೆರವುಗೊಳಿಸಿದ್ದಾರೆ. ಅಲ್ಲದೇ ತಮ್ಮ ಬಳಿಯಿದ್ದ ತ್ರಿವರ್ಣ ಧ್ವಜವನ್ನು ಅಂಗಡಿ ಮೇಲೆ ಕಟ್ಟುವಂತೆ ಹೇಳಿ ಕಟ್ಟಿಸಿದ್ದಾರೆ.

ಬಿಡದಿ ಪಟ್ಟಣದಾದ್ಯಂತ ಬೀದಿ ಬೀದಿಗಳಲ್ಲಿ ತೆರಳಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಕೂಡ ನಡೆಸಿದ್ದಾರೆ. ಸಿಎಎ, ಸಿಎಬಿ, ಎನ್‌ಆರ್‌ಸಿ ದೇಶದ ಮುಸ್ಲಿಮರ ವಿರುದ್ಧವಾಗಿಲ್ಲ, ಮೂರು ದೇಶಗಳಿಂದ ಬಂದ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವುದಾಗಿದೆ ಎಂದು ಜಾಗೃತಿ ಜಾಥಾದಲ್ಲಿ ಸಾರ್ವಜನಿಕರಲ್ಲಿ ತಿಳಿಸಿದರು.

ಹಿಂದೂ ಪರ ಸಂಘಟನೆಯ ಕಾರ್ಯಕರ್ತರಿಗೆ ಹೆದರಿ ಪೊಲೀಸ್ ಠಾಣೆಗೆ ತೆರಳಿದ್ದ ಅಬ್ಜಲ್ ವಿರುದ್ಧ ಬಿಡದಿ ಠಾಣೆಯಲ್ಲಿ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ಫೇಸ್ ಬುಕ್‍ನಲ್ಲಿ ಪೋಸ್ಟ್‌ಗಳು ಮಲೆಯಾಳಂ, ಉರ್ದು ಭಾಷೆಯಲ್ಲಿದ್ದು, ಕನ್ನಡಕ್ಕೆ ಅನುವಾದ ಮಾಡಿಸುವ ಕೆಲಸವನ್ನ ಈಗ ಪೊಲೀಸರು ಮಾಡುತ್ತಿದ್ದಾರೆ. ಅಲ್ಲದೇ ಮಹಮದ್ ಅಬ್ಜಲ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *