ತಾಯಿ ತನ್ನ ಮಗನನ್ನು ಕೆಳಗಿಳಿಸಿದ್ದು ತಪ್ಪಾಯ್ತು – ಪೋಷಕರ ಕಣ್ಣೆದುರೇ ಚಿರತೆಗೆ ಆಹಾರ

– ಮೂರು ತಿಂಗಳಿನಲ್ಲಿ ಮೂರನೇ ಬಲಿ
– ಅರಣ್ಯ ಇಲಾಖೆ ವಿರುದ್ಧ ಜನಾಕ್ರೋಶ

ತುಮಕೂರು: ನರಭಕ್ಷಕ ಚಿರತೆ 5 ವರ್ಷದ ಬಾಲಕನನ್ನು ಬಲಿ ತಗೆದುಕೊಂಡಿರುವ ಘಟನೆ ಗುಬ್ಬಿ ತಾಲೂಕು ಮಣಿಕುಪ್ಪೆಯಲ್ಲಿ ಇಂದು ಸಂಜೆ ನಡೆದಿದೆ.

ದನ ಮೇಯಿಸಲು ಹೊಲಕ್ಕೆ ತೆರಳಿದ್ದ ತಂದೆ ಶಿವಕುಮಾರ್, ತಾಯಿ ಪುಷ್ಪಲತಾ ಜತೆ ಹಠವಿಡಿದು ಬಾಲಕ ಸಮರ್ಥ ಗೌಡ(5) ಕೂಡ ತೆರಳಿದ್ದ. ಅಲ್ಲೇ ಪಕ್ಕದಲ್ಲಿ ಆಟವಾಡುವಾಗ ಕಿರಾತಕ ಚಿರತೆ ಏಕಾಏಕಿ ದಾಳಿ ನಡೆಸಿ ಬಾಲಕನ ರಕ್ತಹೀರಿದೆ.

ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆ ಸಮರ್ಥ್ ಗೌಡನ ಕುತ್ತಿಗೆಗೆ ಬಾಯಿಹಾಕಿ ರಕ್ತ ಹೀರುವ ಸಂದರ್ಭದಲ್ಲಿ ಅಪ್ಪ, ಅಮ್ಮ ಎಂದು ಕಣ್ಣೀರಿಟ್ಟಿದ್ದಾನೆ. ತಮ್ಮ ಕಣ್ಣೆದುರೇ ಇದ್ದ ಒಬ್ಬನೇ ಮಗ ಚಿರತೆಗೆ ಆಹಾರವಾಗುತ್ತಿದ್ದನ್ನು ಕಂಡು ಚೀರಾಡಿ ಸಹಾಯಕ್ಕೆ ಧಾವಿಸುವಷ್ಟರಲ್ಲಿ ಚಿರತೆ ಅರಣ್ಯದೊಳಗೆ ಜಿಗಿದು ಕಣ್ಮರೆಯಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪುಟಾಣಿ ಬಾಲಕನ ಶವ ಕಂಡು ಸ್ಥಳೀಯರು ಮರುಗಿದರು. ಚಿರತೆ ಹಿಡಿಯಲಾಗದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು.

ಇದೇ ಚಿರತೆ ಹೆಬ್ಬೂರು ಹೋಬಳಿ ಬನ್ನಿಕುಪ್ಪೆ ಲಕ್ಷ್ಮಮ್ಮ, ಕುಣಿಗಲ್ ತಾಲೂಕು ದೊಡ್ಡಮರಳವಾಡಿ ಆನಂದಯ್ಯ ಎಂಬುವವರನ್ನು ತಿಂದು ಮುಗಿಸಿದ ಘಟನೆ ಹಸಿರಾಗಿರುವಾಗಲೇ ಈಗ ಮತ್ತೊಂದು ಭಯಾನಕ ಘಟನೆ ನಡೆದಿದೆ.

ದನ ಕಾಯಲು ತೆರಳುವಾಗ ನಾನು ಬರುತ್ತೇನೆ ಎಂದು ಹಠವಿಡಿದು ಬಂದ ಮುದ್ದು ಕಂದ ಸಮರ್ಥ್ ಗೌಡನನ್ನು ಆತನ ತಾಯಿ ಪುಷ್ಪಲತಾ ಎಚ್ಚರಿಕೆಯಿಂದಲೇ ಎತ್ತಿಕೊಂಡು ಜೋಪಾನ ಮಾಡಿದ್ದರು. ಪೊದೆಯಲ್ಲಿ ಚಿರತೆಯಿರುವುದನ್ನು ಗ್ರಹಿಸಿ ಬೆಚ್ಚಿ ಓಡಿಹೋದ ಹಸುಗಳನ್ನು ನೋಡಲು ಮಗು ಕೆಳಗಿಳಿಸಿ ಸ್ವಲ್ಪ ದೂರ ಹೋಗಿದ್ದೇ ತಡ ನರ ಭಕ್ಷಕ ಚಿರತೆ ಪುಟಾಣಿ ಕಂದನ ರಕ್ತ ಹೀರಿದೆ. ಅಪಾಯ ಅರಿತು ಕೆಲವೇ ನಿಮಿಷದಲ್ಲಿ ತಾಯಿ ವಾಪಸಾದರೂ ಕಾಲ ಮಿಂಚಿ ಹೋಗಿತ್ತು.

Comments

Leave a Reply

Your email address will not be published. Required fields are marked *