ಕಲಬುರಗಿಯಲ್ಲಿ ಅಪಾರ್ಟ್ ಮೆಂಟ್‍ಗೆ ನುಗ್ಗಿದ 5 ಹಾವುಗಳು-ಇತ್ತ ಹಾಸನದಲ್ಲಿ ಬೆಡ್‍ರೂಮ್‍ನಲ್ಲಿ ಬಂದು ಕುಳಿತ ಉರಗ

ಕಲಬುರಗಿ/ಹಾಸನ: ಕಲಬುರಗಿ ನಗರದ ಹೊರವಲಯದ ಕೊಟನೂರ ಮಠದ ಬಳಿಯ ಅಪಾರ್ಟ್ ಮೆಂಟ್‍ವೊಂದರಲ್ಲಿ 5 ಹಾವುಗಳು ಏಕಕಾಲಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ್ದವು. ರ್ಯಾಟ್ ಸ್ನೇಕ್ ಎಂದೇ ಕರೆಯಲ್ಪಡುವ ಈ ಹಾವುಗಳನ್ನು ನೋಡಿದ ನಿವಾಸಿಗಳು ತಕ್ಷಣವೇ ಸ್ನೇಕ್ ಪ್ರಶಾಂತ್‍ರನ್ನು ಕರೆಸಿ ಹಾವುಗಳನ್ನು ಸೆರೆ ಹಿಡಿಸಿದ್ದಾರೆ.

ಸೆರೆ ಹಿಡಿದ ಹಾವುಗಳನ್ನು ನಗರದ ಹೊರವಲಯದ ಅರಣ್ಯದಲ್ಲಿ ಬಿಡಲಾಯ್ತು. ಬಯಲು ಪ್ರದೇಶದಲ್ಲೇ ಹೆಚ್ಚಾಗಿ ವಾಸ ಮಾಡುವ ಇಂತಹ ಹಾವುಗಳು ಕಪ್ಪು ಬಣ್ಣದಿಂದ ಕೂಡಿದ್ದು 8ರಿಂದ 10 ಅಡಿ ಉದ್ದ ಇರುತ್ತವೆ.

ಹಾಸನ: ನಗರದ ಚನ್ನಪಟ್ಟಣ ಬಡಾವಣೆಯ ರಮೇಶ್ ಎಂಬವರ ಮನೆಯ ಬೆಡ್‍ರೂಂನಲ್ಲಿ ಮಂಡಲ ಹಾವೊಂದು ಪ್ರತ್ಯಕ್ಷವಾಗಿತ್ತು. ಬಟ್ಟೆ ಮಧ್ಯೆ ಸೇರಿಕೊಂಡಿದ್ದ ಮಂಡಲ ಹಾವನ್ನು ನೋಡಿ ಮನೆಯವರು ಗಾಬರಿಗೊಂಡಿದ್ದರು. ಬಳಿಕ ಉರಗ ತಜ್ಞ ಸ್ನೇಕ್ ಶೇಷಪ್ಪ ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಹಾಸನದ ಹೈಟೆಕ್ ಬಸ್ ನಿಲ್ದಾಣದಲ್ಲಿರುವ ಹೌಸಿಂಗ್ ಬೋರ್ಡ್ ನಿವಾಸಿಗಳು ಹಾವುಗಳ ಭಯದಿಂದ ದಿನ ಕಳೆಯುವಂತಾಗಿದೆ. ಮಂಡಲ, ಕೇರೆ, ನಾಗರಹಾವು ಸೇರಿ ವಿವಿಧ ಜಾತಿಯ ಹಾವುಗಳು ಎಲ್ಲೆಂದರಲ್ಲಿ ಸಿಗುವುದರ ಜೊತೆ ಮನೆಯೊಳಗೆ ಹರಿದು ಬರುತ್ತಿವೆ. ಈ ಬಗ್ಗೆ ನಗರಸಭೆಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ನಿವಾಸಿಗಳು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *