ರಸ್ತೆ ಸರಿಯಿಲ್ಲದ್ದಕ್ಕೆ ಮಂಚದಲ್ಲೇ ಮಹಿಳೆಯನ್ನು ಹೊತ್ತೊಯ್ದ ಐವರು ಪೊಲೀಸರಿಗೆ ಸನ್ಮಾನ

ಲಕ್ನೋ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಮಂಚದಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಉತ್ತರ ಪ್ರದೇಶದ ಐವರು ಪೊಲೀಸರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಗಿದೆ.

ಬಾಂದ ಜಿಲ್ಲೆಯಲ್ಲಿ ಸೋಮವಾರ ಯಶೋಧ(48) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು 500 ಮೀಟರ್ ಅಂದರೆ ಅರ್ಧ ಕಿ.ಮೀವರೆಗೂ ಮಂಚದಲ್ಲೇ ಹೊತ್ತುಕೊಂಡು ಸಾಗಿದ್ದಾರೆ. ಪೊಲೀಸರು ಯಶೋಧ ಅವರನ್ನು ಮಂಚದಲ್ಲಿ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಯಶೋಧ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಐವರು ಪೊಲೀಸರು 500 ಮೀ. ಯಶೋಧ ಅವರನ್ನು ಮಂಚದಲ್ಲಿ ಹೊತ್ತುಕೊಂಡು ನಂತರ ಪಿಆರ್‌ವಿ(ಪೊಲೀಸ್ ರೆಸ್ಪಾನ್ಸ್ ವೆಹಿಕಲ್) ವಾಹನದ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಐವರು ಪೊಲೀಸರಲ್ಲಿ ಇಬ್ಬರು ನರೈನಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಉಳಿದ ಮೂವರು ಪೊಲೀಸರು ಡಯಲ್ 100ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಭಾನುವಾರ ಯಶೋಧ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವಿಷಯ ನಮಗೆ ತಿಳಿಯಿತು. ಆಗ ನಾವು ಸಂತೋಷ್ ಕುಮಾರ್ ಹಾಗೂ ರೋಹಿತ್ ಯಾದವ್‍ನನ್ನು ಬಲ್ದು ಗ್ರಾಮಕ್ಕೆ ಮಾಹಿತಿ ಸಂಗ್ರಹಿಸಲು ಕಳುಹಿಸಿದ್ದೇವು. ಇದೇ ವೇಳೆ ಪಿಆರ್‌ವಿ ವಾಹನ ಕೂಡ ಘಟನೆಯ ಸ್ಥಳಕ್ಕೆ ತಲುಪಿದ್ದು, ಮೂವರು ಪೊಲೀಸರು ಕಾರ್ಯನಿರ್ವಹಿಸುತ್ತಿದ್ದರು. ಆ ಗ್ರಾಮಕ್ಕೆ ತಲುಪಿದಾಗ ಮಹಿಳೆಯ ಮನೆಗೆ ವಾಹನದಲ್ಲಿ ಹೋಗಲು ಸಾಧ್ಯವಿಲ್ಲ ಎನ್ನುವುದು ತಿಳಿಯಿತು. ಹೀಗಾಗಿ ಮಹಿಳೆಯನ್ನು ಮಂಚದಲ್ಲಿ ಪಿಆರ್‌ವಿ ವಾಹನವರೆಗೂ ತನ್ನ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಎಸ್‍ಎಚ್‍ಒ ಅಧಿಕಾರಿ ಪ್ರಕಾಶ್ ಸರೋಜ್ ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ತನಿಖೆ ಮಾಡಿದಾಗ ಹಣದ ವಿಚಾರವಾಗಿ ಯಶೋಧ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿಯಿತು. ಆದರೆ ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿಲ್ಲ. ನಾವು ಮಹಿಳೆಯ ಮನೆ ತಲುಪುವವರೆಗೂ ಅಲ್ಲಿದ್ದ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದರು. ಮಹಿಳೆಯ ಮನೆಯ ಜಾಗ ಹುಡುಕಲು ತುಂಬಾ ಕಷ್ಟವಾಯಿತು. ಮಹಿಳೆಯ ಮನೆಗೆ ಯಾವುದೇ ವಾಹನದಲ್ಲಿ ಹೋಗಲು ಸಾಧ್ಯವಿರಲಿಲ್ಲ. ಹಾಗಾಗಿ ಪಿಆರ್‌ವಿ ವಾಹನವನ್ನು ಮುಖ್ಯರಸ್ತೆಯಲ್ಲೇ ಪಾರ್ಕ್ ಮಾಡಿದ್ದೇವು. ಮುಖ್ಯರಸ್ತೆಯಿಂದ ಮಹಿಳೆಯ ಮನೆಗೆ ಅರ್ಧ ಕಿ.ಮೀ ದೂರವಿತ್ತು. ಹಾಗಾಗಿ ಮಹಿಳೆಯನ್ನು ಮಂಚದ ಮೇಲೆ ಮಲಗಿಸಿ ಹೊತ್ತುಕೊಂಡು ಹೋಗಲು ನಿರ್ಧರಿಸಿದ್ದೇವು ಎಂದು ಪ್ರಕಾಶ್ ಸರೋಜ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರ ಕರ್ತವ್ಯನಿಷ್ಠೆಯನ್ನು ತೋರಿಸುತ್ತದೆ. ಮಹಿಳೆಗೆ ಚಿಕಿತ್ಸೆಯ ಅವಶ್ಯಕತೆಯಿತ್ತು. ಪೊಲೀಸರ ಸಮಯಪ್ರಜ್ಞೆದಿಂದ ಮಹಿಳೆಗೆ ಚಿಕಿತ್ಸೆ ದೊರೆಯಿತು ಹಾಗೂ ಅವರ ಪ್ರಾಣ ಉಳಿಯಿತು. ನಾನು ಐವರು ಪೊಲೀಸರನ್ನು ಅವರ ಈ ಒಳ್ಳೆಯ ಕೆಲಸಕ್ಕಾಗಿ ಸನ್ಮಾನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸನ್ಮಾನ ಹೊರತಾಗಿ ಅವರಿಗೆ ನಗದು ನೀಡುತ್ತೇವೆ ಎಂದು ಬಾಂದ ಜಿಲ್ಲೆಯ ಎಸ್‍ಪಿ ತಿಳಿಸಿದ್ದಾರೆ.

https://twitter.com/PoliceSewakHai/status/1069318818542034952

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *