ಮಧ್ಯಪ್ರದೇಶದಲ್ಲಿ ಗೋಲಿಬಾರ್‍ಗೆ ಐದು ಬಲಿ: ಈರುಳ್ಳಿ, ಬೇಳೆಗೆ ಬೆಂಬಲ ಬೆಲೆ ಕೇಳಿದ್ದಕ್ಕೆ ಗುಂಡು

ಮಂಡ್‍ಸೌರ್: ಮಧ್ಯಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಐದು ಮಂದಿ ರೈತರು ಮೃತಪಟ್ಟಿದ್ದಾರೆ.

ಈರುಳ್ಳಿ ಹಾಗೂ ಬೇಳೆ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರ ನಡೆಸುತ್ತಿರುವ ಹೋರಾಟ ಇವತ್ತು ಮಂಡ್‍ಸೌರ್ ಜಿಲ್ಲೆಯಲ್ಲಿ ಹಿಂಸಾರೂಪಕ್ಕೆ ತಿರುಗಿತ್ತು. ಮಂಡ್‍ಸೌರ್ ಜಿಲ್ಲೆಯ ಪಿಪ್ಲಿಯಾಮಂಡಿ ಪ್ರದೇಶದಲ್ಲಿ ರೈತರು-ಪೊಲೀಸರ ಮಧ್ಯೆ ಘರ್ಷಣೆ ನಡೆಯಿತು.

ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಫೈರಿಂಗ್ ಮಾಡಿದ್ರು. ಘಟನೆಯಲ್ಲಿ ಕನ್ನಯ್ಯಲಾಲ್ ಪಾಟಿದಾರ್ ಹಾಗೂ ಬನ್‍ಶೀ ಪಾಟೀದಾರ್ ಅನ್ನೋರು ಸೇರಿ ಐವರು ರೈತರು ಬಲಿಯಾಗಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ.

ಮಂಡ್‍ಸೌರ್‍ನಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ವದಂತಿ ಹರಡದಂತೆ ಕೆಲ ಪ್ರದೇಶಗಳ್ಲಿ ಇಂಟರ್‍ನೆಟ್ ಸೇವೆ ರದ್ದು ಮಾಡಲಾಗಿದೆ. ಘಟನೆ ಬಗ್ಗೆ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

ಗೋಲಿಬಾರ್ ಖಂಡಿಸಿ ಬುಧವಾರ ಮಧ್ಯಪ್ರದೇಶ ಬಂದ್‍ಗೆ ಕಿಸಾನ್ ಮಜ್ದೂರ್ ಸಂಘ ಕರೆ ನೀಡಿದೆ. ಆದ್ರೆ ರೈತರ ಎಲ್ಲಾ ಬೇಡಿಕೆ ಈಡೇರಿಕೆ ಸರ್ಕಾರ ಕ್ರಮಕೈಗೊಂಡಿದೆ. ನಮ್ಮದು ರೈತ ಸರ್ಕಾರ ಅಂತ ಸಿಎಂ ಶಿವರಾಜ್ ಚೌವ್ಹಾಣ್ ಹೇಳಿದ್ದಾರೆ.

ಪೊಲೀಸರು ಶೂಟ್ ಮಾಡಿಲ್ಲ ಸಮಾಜಘಾತುಕರು ಈ ಕೃತ್ಯ ಎಸಗಿದ್ದಾರೆ ಅಂತ ಗೃಹ ಸಚಿವ ಭೂಪೇಂದ್ರ ಸಿಂಗ್ ಹೇಳಿದ್ರೆ, ಉಜ್ಜೈನಿ ಎಸಿ ಓಂ ಝಾ ಮಾತ್ರ ಪೊಲೀಸರೇ ಶೂಟ್ ಮಾಡಿದ್ರಿಂದ ರೈತರು ಸಾವನ್ನಪ್ಪಿದ್ದಾರೆ ಅಂತ ಹೇಳಿರೋದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

ಮೃತ ರೈತರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಈ ಮಧ್ಯೆ, ದೇಶದ ರೈತರ ಜೊತೆ ಕೇಂದ್ರ ಸರ್ಕಾರ ಯುದ್ಧ ಮಾಡ್ತಿದೆ. ರೈತರು ಹಕ್ಕುಗಳನ್ನ ಕೇಳಿದ್ರೆ ಬುಲೆಟ್ ಪ್ರಯೋಗಿಸೋದು ಬಿಜೆಪಿಯ `ನವಭಾರತ’ ಅಂತ ರಾಹುಲ್ ಗಾಂಧಿ ಟೀಕಿಸಿದ್ದಾರೆ.

Comments

Leave a Reply

Your email address will not be published. Required fields are marked *