ಕರಾವಳಿಯ ಕಡಲಿನಲ್ಲಿ ಕಡಿಮೆಯಾದ ಮೀನುಗಳು

ಮಂಗಳೂರು: ಕರಾವಳಿಯ ಆರ್ಥಿಕತೆಯ ಜೀವನಾಡಿ ಮೀನುಗಾರಿಕೆಗೆ ದೊಡ್ಡ ಹೊಡೆತ ಬಿದ್ದಿದೆ. ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಮತ್ಸ್ಯಕ್ಷಾಮ ಪಶ್ಚಿಮ ಕರಾವಳಿಯಲ್ಲಿ ಕಂಡು ಬಂದಿದ್ದು, ಮೀನಿನ ಬೇಟೆ ಸಿಗದೆ ಕಡಲ ಮಕ್ಕಳು ಕಂಗಾಲಾಗಿದ್ದಾರೆ.

ಜಾಗತಿಕ ತಾಪಮಾನ ಏರಿಕೆಯ ಜೊತೆ ಅವೈಜ್ಞಾನಿಕ ಮೀನುಗಾರಿಕಾ ಪದ್ಧತಿಯಿಂದ ಕಡಲಿನಲ್ಲಿ ಮೀನಿನ ಸಂತತಿ ಭಾರೀ ಪ್ರಮಾಣದಲ್ಲಿ ಕೆಳಮುಖವಾಗಿದ್ದು, ಶೇ. 80ರಷ್ಟು ಬೋಟ್ ಗಳು ಮೀನುಗಾರಿಕೆ ನಡೆಸದೆ ದಡದಲ್ಲೇ ಲಂಗರು ಹಾಕಿದೆ.

ಸಾಮಾನ್ಯವಾಗಿ ಜನವರಿ ಮೊದಲ ತಿಂಗಳಿನಿಂದ ಸಮುದ್ರದಲ್ಲಿ ಮೀನಿನ ಲಭ್ಯತೆ ಹೆಚ್ಚಿದ್ದು, ಈ ಬಾರಿ ನಿರೀಕ್ಷೆಯಂತೆ ಮೀನುಗಾರರಿಗೆ ಮೀನುಗಳು ಸಿಗುತ್ತಿಲ್ಲ. ಮಂಗಳೂರು ಬಂದರಿನಲ್ಲಿ ಟ್ರಾಲ್ ಬೋಟ್‍ಗಳಲ್ಲಿ ಹೆಚ್ಚಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸದ್ಯ ಕೆಲಸವಿಲ್ಲದೆ ನಿರ್ಗತಿಕರಾಗಿದ್ದಾರೆ.

ಬಂದರಿನಲ್ಲಿ ಸುಮಾರು 30,000 ಮಂದಿ ಕೆಲಸ ಮಾಡುತ್ತಿದ್ದು, ಬೋಟ್‍ಗಳು ಸಮುದ್ರಕ್ಕಿಳಿಯದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾಮಾನ್ಯವಾಗಿ ಒಂದು ಬೋಟು ಮೀನು ಹಿಡಿದು ತಂದರೆ ಅದರಿಂದ ಐಸ್ ಪ್ಲಾಂಟ್‍ಗಳು, ಬೋಟುಗಳಿಂದ ಮೀನು ತೆಗೆಯುವ ಕಾರ್ಮಿಕರು, ಮೀನು ವ್ಯಾಪಾರಿಗಳು ಕೆಲಸ ಮಾಡಬಹುದು. ಆದರೆ ಈಗ ಯಾರಿಗೂ ಕೆಲಸ ಇಲ್ಲದೆ ಸಂತ್ರಸ್ತರಾಗಿದ್ದಾರೆ.

ಅವೈಜ್ಞಾನಿಕ ಮೀನುಗಾರಿಕಾ ವಿಧಾನದಿಂದಲೂ ಮೀನಿನ ಸಂತತಿ ನಶಿಸುತ್ತಿದೆ. ಕೇಂದ್ರ ಸರ್ಕಾರದ ನಿಷೇಧಿತ ಲೈಟ್ ಫಿಶಿಂಗ್ ವಿಧಾನದಲ್ಲೂ ಮೀನುಗಾರಿಕೆ ನಡೆಸಲಾಗುತ್ತಿದ್ದು, ಮೀನುಗಳು ನಾಶವಾಗುತ್ತಿದೆ. ಪ್ರಖರವಾದ ಲೈಟ್‍ನಿಂದ ಮೀನುಗಳಿಗೆ ಸಿಗುವ ಆಹಾರದವೂ ಕರಟಿ ಹೋಗುತ್ತಿದ್ದು, ಆಹಾರವಿಲ್ಲದೆಯೂ ಮೀನುಗಳು ಸಾವನ್ನಪ್ಪುತ್ತಿದೆ.

ಕಳೆದ ವರ್ಷದ ಲೆಕ್ಕಾಚಾರವನ್ನು ಗಮನಿಸಿದಾಗ ಈ ವರ್ಷದಲ್ಲಿ 756 ಕೋಟಿ ನಷ್ಟವಾಗಿದ್ದು, ಮೀನುಗಾರರೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಡಲಿನಲ್ಲಿ ಜೀವ ಪಣಕ್ಕಿಟ್ಟು ಮತ್ಸ್ಯ ಬೇಟೆಯಾಡುವ ಕಡಲ ಮಕ್ಕಳನ್ನು ಸರ್ಕಾರವೂ ಕೈ ಬಿಟ್ಟಿದ್ದು, ಅತಂತ್ರರಾಗಿದ್ದಾರೆ.

Comments

Leave a Reply

Your email address will not be published. Required fields are marked *