ಮೊದಲ ರಕ್ಷಣಾ ಸಲಹೆಗಾರ್ತಿಯಾಗಿ ನೇಮಕಗೊಂಡ ಕಾರವಾರದ ನೌಕಾ ನೆಲೆಯ ಎಂಜಿನಿಯರ್

ನವದೆಹಲಿ: ಕಾರವಾರದ ನೌಕಾ ನೆಲೆಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲೆಫ್ಟಿನೆಂಟ್ ಕಮಾಂಡರ್ ಕರಾಬಿ ಗೊಗೋಯ್ ಅವರನ್ನು ನೌಕಾಪಡೆಯ ಮೊದಲ ರಕ್ಷಣಾ ಸಲಹೆಗಾರ್ತಿಯಾಗಿ ನೇಮಕ ಮಾಡಲಾಗಿದೆ.

ಸೆಪ್ಟೆಂಬರ್‍ನಲ್ಲಿ ಭಾರತೀಯ ವಾಯುಪಡೆ (ಐಎಎಫ್) ಮಾಸ್ಕೋ ದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ವಿಂಗ್ ಕಮಾಂಡರ್ ಅಂಜಲಿ ಸಿಂಗ್‍ರನ್ನು ಉಪ ರಕ್ಷಣಾ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಮುಂದಿನ ತಿಂಗಳು ಕರಾಬಿ ಗೊಗೋಯ್ ಎಲ್ಲಾ ವಿಭಾಗಗಳಿಂದ ಅನುಮೋದನೆ ಪಡೆದ ಬಳಿಕ ಅವರು ಮಾಸ್ಕೋದ ಅದೇ ರಾಯಭಾರ ಕಚೇರಿಯಲ್ಲಿ ಹೊಸ ರಕ್ಷಣಾ ಸಲಹೆಗಾರ್ತಿಯಾಗಿ ನಿರ್ವಹಿಸಲಿದ್ದಾರೆ. ಅದಕ್ಕಿಂತ ಮೊದಲು ಅವರು ರಷ್ಯನ್ ಭಾಷೆ ಕೋರ್ಸ್ ಮುಗಿಸಲಿಸಿದ್ದಾರೆ.

ಅಸ್ಸಾಂ ಮೂಲದ ಗುವಾಹಟಿಯವರಾಗಿರುವ ಕರಾಬಿ ಗೊಗೋಯ್ ಅವರು 2010ರಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಅವರ ಕಾರವಾರದ ನೌಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪತಿ ಲೆ.ಕ. ಪ್ರಾಂಜಲ್ ಹಾಂಡಿಕ್ ನೌಕಾಪಡೆಯಲ್ಲಿ ಅಧಿಕಾರಿಯಾಗಿದ್ದಾರೆ. ಹಿರಿಯ ಅಧಿಕಾರಿಗಳು ನಡೆಸಿದ ಸಂದರ್ಶನ ಮತ್ತು ಇತರ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಗೊಗೋಯ್‍ರನ್ನು ಹೊಸ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ನೌಕಾಪಡೆಯಲ್ಲಿ ಗೊಗೋಯ್ ಹೊಂದಿರುವ ಲೆಫ್ಟಿನೆಂಟ್ ಕಮಾಂಡರ್ ಭೂಸೇನೆಯ ಮೇಜರ್ ಶ್ರೇಣಿಗೆ ಸಮನಾಗಿದೆ. ಅಮೆರಿಕ, ಯುನೈಟೆಡ್ ಕಿಂಗ್‍ಡಮ್ ಮತ್ತು ರಷ್ಯಾಗಳಲ್ಲಿರುವ ಭಾರತದ ರಾಯಭಾರ ಕಚೇರಿಗಳಲ್ಲಿ 100ಕ್ಕೂ ಹೆಚ್ಚು ರಕ್ಷಣಾ ಸಲಹೆಗಾರರು ಇದ್ದಾರೆ. ಈ ಹುದ್ದೆಗಳಲ್ಲಿರುವವರು ಆತಿಥೇಯ ರಾಷ್ಟ್ರಗಳ ಸೇನೆಯ ಪ್ರಮುಖ ವಿಭಾಗಗಳ ಜತೆಗೆ ಭದ್ರತೆ, ಮಿಲಿಟರಿ ತಂತ್ರಜ್ಞಾನ ಸಂಬಂಧಿಸಿದಂತೆ ಅಧ್ಯಯನ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *