ಎಲ್ಲಾ ವಾಹನಗಳಿಗೂ ಹೊಸ ನಂಬರ್ ಪ್ಲೇಟ್- ದೇಶದಲ್ಲಿಯೇ ಮೊದಲ ಬಾರಿಗೆ ಕರುನಾಡಲ್ಲಿ ಜಾರಿ!

ಬೆಂಗಳೂರು: ಇಷ್ಟು ದಿನ ಡಿಸೈನ್ ಡಿಸೈನ್ ಆಗಿ ನಂಬರ್ ಪ್ಲೇಟ್ ಹಾಕಿಸುತ್ತಿದ್ದ ಸ್ಟೈಲ್‍ಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಇದೇ ಮೊದಲ ಬಾರಿಗೆ ಇಡೀ ದೇಶದಲ್ಲಿಯೇ ಹೊಸ ಪ್ರಯೋಗ ಮಾಡಲು ರಾಜ್ಯದ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಕೆಲವೇ ದಿನಗಳಲ್ಲಿ ಹೊಸ ಯೋಜನೆಗೆ ಸಾರಿಗೆ ಸಚಿವ ರೇವಣ್ಣ ಸಿದ್ಧರಾಗಿದ್ದಾರೆ. ರಾಜ್ಯದಲ್ಲಿರೋ ಸರಿ ಸುಮಾರು 66 ಲಕ್ಷ ವಾಹನಗಳಿಗೆ ಹೊಸ ನಂಬರ್ ಪ್ಲೇಟ್‍ಗಳನ್ನು ಹಾಕಿಸಲು ಪ್ಲಾನ್ ಮಾಡಿದ್ದು, ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ. ಪ್ರಸ್ತುತ ಒಂದು ವಾಹನದ ನಂಬರ್ ಪ್ಲೇಟಿನ ಬೆಲೆ 1 ಸಾವಿರ ಇದೆ. ಆದರೆ ಹೊಸ ನಂಬರ್ ಪ್ಲೇಟ್‍ಗಳ ಅಳವಡಿಕೆ ಸರ್ಕಾರ ಮುಂದಾದರೆ ಮಾಲೀಕರ ಜೇಬಿಗೆ 2200 ರೂಪಾಯಿ ಕತ್ತರಿ ಬೀಳಲಿದೆ ಎಂದು ಹೇಳಲಾಗಿದೆ.

 

ಇನ್ನು ಈ ರೀತಿಯ ನಂಬರ್ ಪ್ಲೇಟ್ ಜಾರಿಗೆ ತರುತ್ತಿರೋ ಮೊದಲ ರಾಜ್ಯ ಕರ್ನಾಟಕವಾಗಿದೆ. ಹಾಗಿದ್ದರೆ ಈ ನಂಬರ್ ಪ್ಲೇಟ್‍ನಿಂದ ಎನೇನು ಅನುಕೂಲವಾಗಲಿದೆ ಎಂಬುವುದನ್ನು ನೋಡುವುದಾದರೆ;

1.  ನಂಬರ್, ಗಾತ್ರದಲ್ಲಿ ದೊಡ್ಡದಾಗಿ ಕಾಣಲಿದೆ
2.  ಕತ್ತಲಲ್ಲಿಯೂ ಸುಲಭವಾಗಿ ಓಡಾಡುವಂತೆ ರೇಡಿಯಂ ಬಣ್ಣ
3.  ಸ್ವಂತ ವಾಹನಗಳಿಗೆ, ಬಾಡಿಗೆ ವಾಹನಗಳಿಗೆ ಹಾಗೂ ಬಸ್‍ಗಳಿಗೆ ಪ್ರತ್ಯೇಕ ಇಂಗ್ಲೀಷ್ ಅಕ್ಷರ
4.  45 ಡಿಗ್ರಿ ಕೋನದಲ್ಲಿಯೂ ಓದುವಂತೆ ಅಕ್ಷರ ವಿನ್ಯಾಸ
5.  ಕ್ರೋಮಿಯಂ ಹಾಲೋಗ್ರಾಮ್ ಲೇಸರ್ ನಂಬರ್ ಪ್ಲೇಟ್

ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಇದಾಗಲಿದ್ದು, ಇನ್ನು ಮುಂದೆ ವಾಹನ ಕಳ್ಳರಿಗೆ ಮತ್ತು ಬೇರೆ ರೀತಿಯ ವ್ಯವಹಾರ ಮಾಡುವವರು ಸುಲಭವಾಗಿ ಸಿಕ್ಕಿಹಾಕಿಕೊಳ್ಳೋದಂತು ಗ್ಯಾರಂಟಿ. ಹಳೆಯ ಐಎನ್‍ಡಿ ಪ್ಲೇಟ್ ಬದಲಾಗಿ ಇದು ಹೊಸ ವಿನ್ಯಾಸವುಳ್ಳ ಪ್ಲೇಟ್ ಇದಾಗಲಿದ್ದು, ಇದು ದೇಶದಲ್ಲಿಯೇ ಮೊದಲು ಎಂದು ಸಾರಿಗೆ ಸಚಿವರು ಹೇಳುತ್ತಾರೆ.

ಪತ್ರಕರ್ತೆ ಗೌರಿ ಹಂತಕರು ಬೈಕ್‍ನಲ್ಲಿ ಓಡಾಡಿರುವ ದೃಶ್ಯ ಸಿಕ್ಕಿದ ಮೇಲೂ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಕಾರಣದಿಂದಲೇ ಹೊಸ ನಂಬರ್ ಪ್ಲೇಟ್ ಜಾರಿ ಮಾಡಲು ಸರ್ಕಾರ ಮುಂದಾಗಿರುವಂತೆ ಕಾಣುತ್ತಿದೆ. ಆದರೆ ದುಬಾರಿ ವೆಚ್ಚವಾದರೆ ಮಾಲೀಕರು ತಿರುಗಿ ಬೀಳುವ ಸಾಧ್ಯತೆ ಇದೆ ಎಂಬುವುದಾಗಿ ತಿಳಿದುಬಂದಿದೆ.

https://www.youtube.com/watch?v=YIM6qHz8M_0

Comments

Leave a Reply

Your email address will not be published. Required fields are marked *