ಕಾರವಾರ| ಹಳಿಯಾಳದಲ್ಲಿ ವಿದ್ಯುತ್ ಅವಘಡ – ಮಳಿಗೆ, ಮನೆಗಳು ಬೆಂಕಿಗಾಹುತಿ

ಕಾರವಾರ: ವಿದ್ಯುತ್ ಶಾರ್ಟ್‌ ಸೆರ್ಕ್ಯೂಟ್‌ನಿಂದಾಗಿ ಅಂಗಡಿ, ಮನೆಗಳಿಗೆ ಬೆಂಕಿ ತಗುಲಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಉಪ ನೋಂದಣಿ ಕಚೇರಿ ಬಳಿ ನಡೆದಿದೆ.

ಉಪ ನೋಂದಣಿ ಕಚೇರಿ ಬಳಿಯ ರವಿ ಜೆರಾಕ್ಸ್ ಸೆಂಟರ್‌ನಲ್ಲಿ ವಿದ್ಯುತ್ ಸ್ಪರ್ಶವಾಗಿ ಬೆಂಕಿ ಉಂಟಾಗಿದ್ದು, ಪಕ್ಕದಲ್ಲೇ ಇದ್ದ ಒಂದು ಮನೆ, ಎರಡು ಅಂಗಡಿ ಹಾಗೂ ಒಂದು ಹೋಟೆಲ್‌ಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ.

ವಿದ್ಯುತ್ ಅವಘಡದಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ನಷ್ಟವಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಬೆಂಕಿಯ ಕೆನ್ನಾಲಿಗೆ ಇನ್ನೂ ಹೆಚ್ಚಿನ ಭಾಗಕ್ಕೆ ಪಸರಿಸಿದ್ದು, ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಸಂಬಂಧ ಹಳಿಯಾಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.