ನಿಯಮ ಉಲ್ಲಂಘಿಸಿ ಹೇಮಾವತಿ ನೀರು ಹರಿಸಿದ ಕೃಷ್ಣಪ್ಪ ವಿರುದ್ಧ ಎಫ್‍ಐಆರ್

ತುಮಕೂರು: ಹೇಮಾವತಿ ನೀರು ನಿರ್ವಹಣಾ ಸಭೆಯ ನಿರ್ಧಾರ ಧಿಕ್ಕರಿಸಿ ನಾಲೆಯ ಗೇಟನ್ನು ದರ್ಪದಿಂದ ತೆಗೆದು, ನೀರು ಹರಿಸಿಕೊಂಡಿದ್ದ ಜೆಡಿಎಸ್‍ನ ಮಾಜಿ ಶಾಸಕ ಎಂಟಿ ಕೃಷ್ಣಪ್ಪ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಕುಣಿಗಲ್‍ಗೆ ನೀರು ಹೋಗುತಿದ್ದ ಮಾರ್ಗ ಮಧ್ಯೆ ಡಿ.ಎಸ್.ಪಾಳ್ಯ ಬಳಿ ಎಸ್ಕೇಪ್ ಗೇಟಿಗೆ ಹಾನಿ ಮಾಡಿ, ಕೃಷ್ಣಪ್ಪ ಅವರು ಬೆಂಬಲಿಗರ ಜೊತೆಗೆ ದಾಂಧಲೆ ನಡೆಸಿ ನೀರು ಹರಿಸಿಕೊಂಡಿದ್ದರು. ಈ ವೇಳೆ ತಡೆಯಲು ಹೋದ ಹೇಮಾವತಿ ಅಧಿಕಾರಿ ಹಾಗೂ ಪೊಲೀಸರಿಗೆ ನಿಂದಿಸಿ ಗೂಂಡಾವರ್ತನೆ ತೋರಿದ್ದರು. ಅಲ್ಲದೆ ಎಸ್ಕೇಪ್ ಗೇಟ್ ತೆಗೆಯುವಾಗ ಅದಕ್ಕೆ ಹಾನಿ ಉಂಟುಮಾಡಿದ್ದರು. ಹೇಮಾವತಿ ನೀರು ನಿರ್ವಹಣಾ ಸಭೆಯ ನಿರ್ಧಾರ ಧಿಕ್ಕರಿಸಿ ನಿಯಮ ಉಲ್ಲಂಘಿಸಿ ದರ್ಪ ಮೆರೆದಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಹೇಮಾವತಿ ನಾಲಾ ಮುಖ್ಯ ಅಭಿಯಂತರ ಬಾಲಕೃಷ್ಣ ಹೆಬ್ಬೂರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ, ಸಾರ್ವಜನಿಕ ಆಸ್ತಿಗೆ ಹಾನಿ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಶಾಂತಿ ಭಂಗ ಮಾಡಿದ್ದಾರೆ ಎಂದು ಕೃಷ್ಣಪ್ಪ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಶುಕ್ರವಾರ ನಡೆದ ಹೇಮಾವತಿ ನೀರು ನಿರ್ವಹಣಾ ಸಭೆಯಲ್ಲಿ ವೇಳಾಪಟ್ಟಿ ಪ್ರಕಾರ ತಾಲೂಕುಗಳಿಗೆ ನೀರು ಬಿಡಲು ನಿರ್ಧಾರ ಮಾಡಲಾಗಿತ್ತು. ಈ ಸಭೆಯ ನಿರ್ಧಾರಕ್ಕೆ ಕ್ಯಾರೇ ಎನ್ನದ ಕೃಷ್ಣಪ್ಪ ಡಿ.ಎಸ್.ಪಾಳ್ಯ ಬಳಿ ಎಸ್ಕೇಪ್ ಗೇಟಿನಿಂದ ನೀರು ಹರಿಸಿ ಗುಂಡಾವರ್ತನೆ ಮೆರೆದಿದ್ದರು. ಹೇಮಾವತಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆಯದೇ ನೀರನ್ನು ಹರಿಸುವಂತಿಲ್ಲ. ಆದರೆ ಈ ನಿಯಮವನ್ನು ಉಲ್ಲಂಘಿಸಿ ಕೃಷ್ಣಪ್ಪ ಅವರು ನೀರು ಹರಿಸಿದ್ದರು.

ತುರುವೇಕೆರೆಯಲ್ಲಿ ಸದ್ಯ ಬಿಜೆಪಿಯ ಮಸಾಲ ಜಯರಾಮ್ ಶಾಸಕರಾಗಿದ್ದಾರೆ. ಆದರೆ ಜೆಡಿಎಸ್‍ನ ಮಾಜಿ ಶಾಸಕ ಈ ರೀತಿ ದರ್ಪ ಮೆರೆದಿರುವುದು ಬಿಜೆಪಿಯವರ ಕೆಂಗಣ್ಣಿಗೆ ಕಾರಣವಾಗಿತ್ತು.

Comments

Leave a Reply

Your email address will not be published. Required fields are marked *