ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ – ಎಫ್‍ಐಆರ್ ದಾಖಲು

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಈ ಬಗ್ಗೆ ದರ್ಶನ್ ಅವರ ಮನೆ ಮ್ಯಾನೇಜರ್ ಶ್ರೀನಿವಾಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿ ಏನಿದೆ?
ನಾನು ಸುಮಾರು 15 ವರ್ಷಗಳಿಂದ ನಟ ದರ್ಶನ್ ತೂಗುದೀಪ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ದರ್ಶನ್ 19ರಂದು ‘ಒಡೆಯ’ ಸಿನಿಮಾ ಶೂಟಿಂಗ್‍ಗಾಗಿ ಹೈದರಾಬಾದ್‍ನಲ್ಲಿದ್ದರು. ಮತ್ತೆ 20ಕ್ಕೆ ದರ್ಶನ್ ಮಂಡ್ಯಕ್ಕೆ ಬಂದು ಮತ್ತೆ ಹೈದರಾಬಾದ್‍ಗೆ ಹೋಗಿದ್ದಾರೆ. ದರ್ಶನ್ ಅವರಿಗೆ ಸೇರಿದ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ತೂಗದೀಪ ನಿಲಯ ಈ ಮನೆಯನ್ನು ದರ್ಶನ್ ಅವರು ಸಿನಿಮಾ ಶೂಟಿಂಗ್‍ಗೆ ಹೋಗಿದ್ದ ಸಮಯದಲ್ಲಿ ಸೆಕ್ಯೂರಿಟಿ ಗಾರ್ಡ್‍ಗಳಾದ ಕೆಂಪೇಗೌಡ ಹಾಗೂ ಪವನ್ ನೋಡಿಕೊಳ್ಳುತ್ತಾರೆ.

22ರ ಮಧ್ಯರಾತ್ರಿ ಸುಮಾರು 12.54ಕ್ಕೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ದರ್ಶನ್ ಅವರ ಮನೆಯ ಬಳಿಗೆ ನಡೆದುಕೊಂಡು ಬಂದು ಕಲ್ಲಿನಿಂದ ಮನೆಯ ಕಿಟಕಿ ಗ್ಲಾಸ್ ಹೊಡೆದು, ಮನೆಯ ಮುಂದೆ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಕಿದ್ದ ಫ್ಲೆಕ್ಸ್ ಹರಿದಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಕೆಂಪೇಗೌಡ ಅವರು ಹೊರ ಬಂದಾಗ ಕಲ್ಲಿನಿಂದ ಮನೆಯ ಗ್ಲಾಸ್ ಒಡೆದ ವ್ಯಕ್ತಿಯು ಅಲ್ಲಿಂದ ಓಡಿ ಹೋಗಿದ್ದಾನೆ. ಈ ವಿಚಾರವನ್ನು ಸೆಕ್ಯೂರಿಟಿ ಗಾರ್ಡ್ ಈ ದಿನ ನನ್ನ ಬಳಿ ಹೇಳಿದ್ದಾನೆ. ದರ್ಶನ್ ಅವರ ಮನೆಯ ಕಿಟಕಿ ಗ್ಲಾಸ್ ಕಲ್ಲಿನಿಂದ ಹೊಡೆದು ಜಖಂಗೊಳಿಸಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕು.

ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಕಲ್ಲು ತೂರಾಟ ಮಾಡಿದವನ ಹುಡುಕಾಟಕ್ಕೆ ಪೊಲೀಸರು ಗಲಿಬಿಲಿ ಆಗಿದ್ದಾರೆ. ಏಕೆಂದರೆ ಕೃತ್ಯ ನಡೆದಿರೋದು ಯಾವುದೇ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ. ಸಿಸಿಟಿವಿಯಲ್ಲಿ ಸೆರೆಯಾಗದಂತೆ ಆರೋಪಿ ಓಡಿ ಹೋಗಿದ್ದಾನೆ. ಆದರೆ ಒಂದೆರಡು ಫೂಟೇಜ್‍ಗಳಲ್ಲಿ ಆರೋಪಿ ಕಾಣಿಸಿಕೊಂಡಿದ್ದು, ಅದು ಕೂಡ ಅಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಆರೋಪಿ ಟಾಟಾ ಏಸ್ ವಾಹನದಲ್ಲಿ ಬಂದಿದ್ದ ಎನ್ನುವ ವಿಚಾರ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *