ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್‌ ದಾಖಲು

ಶಿವಮೊಗ್ಗ: ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarty Sulibele) ವಿರುದ್ಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಎಫ್‌ಐಆರ್‌ (FIR) ದಾಖಲಾಗಿದೆ.

ಎನ್‌ಎಸ್‌ಯುಐ (NSUI) ಕಾರ್ಯಕರ್ತರು ನೀಡಿದ ದೂರಿನ ಆಧಾರದಲ್ಲಿ ಸಿಆರ್‌ಪಿಸಿ ಕಲಂ 157 ಅಡಿ ಎಫ್‌ಐಆರ್‌ ದಾಖಲಾಗಿದೆ. ಎಸ್‌ಎಸ್‌ಎಲ್‌ಸಿ (SSLC) ಪೂರ್ವ ಸಿದ್ದತಾ ಪರೀಕ್ಷೆ ವೇಳಾಪಟ್ಟಿ ವಿಷಯದಲ್ಲಿ ಧಾರ್ಮಿಕ ಭಾವನೆ ಕೆರಳಿಸಿರುವ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ಸೂಲಿಬೆಲೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಅಡ್ಡಿ – ವಿರೋಧದ ನಡ್ವೆ ಯಶಸ್ವಿಯಾದ ನಮೋ ಭಾರತ್‌

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ. ಫೆ.26 ರಿಂದ ಆರಂಭವಾಗುವ ಪರೀಕ್ಷೆ ಮಾರ್ಚ್‌ 2 ರವರೆಗೆ ನಡೆಯಲಿದೆ.

ಐದು ವಿಷಯಗಳು ಬೆಳಗ್ಗೆ 10:15ಕ್ಕೆ ಆರಂಭವಾದರೆ ಮಾರ್ಚ್‌ 1ರ ವಿಜ್ಞಾನ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಮಾರ್ಚ್‌ 1 ಶುಕ್ರವಾರ ಒಂದೇ ದಿನ ಮಧ್ಯಾಹ್ನದ ನಂತರ ಪರೀಕ್ಷೆ ನಡೆಸುತ್ತಿರುವುದು ಯಾಕೆ ಎನ್ನುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿತ್ತು.

ಸೂಲಿಬೆಲೆ ಹೇಳಿದ್ದೇನು?
​ಕರ್ನಾಟಕ ರಾಜ್ಯ 10ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಶುಕ್ರವಾರ ಹೊರತು ಪಡಿಸಿ ಎಲ್ಲಾ ಪರೀಕ್ಷೆಗಳು ಬೆಳಗಿನ ಅವಧಿಯಲ್ಲಿ ನಡೆಯಲಿದೆ. ಯಾಕೆ ನಮಾಜ್‌ ಸಮಯಕ್ಕಾ ಎಂದು ಸಾಮಾಜಿಕ ಜಾಲತಾಣದಲ್ಲಿ ಸೂಲಿಬೆಲೆ ಪ್ರಶ್ನಿಸಿದ್ದರು.