ಲಕ್ನೋ: ನಟಿ ಹಾಗೂ ರಾಮ್‍ಪುರದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರು ಖಾಕಿ ಬಣ್ಣದ ಒಳ ಉಡುಪು ಧರಿಸುತ್ತಾರೆ ಎಂದು ಸಮಾಜವಾದಿ ಪಕ್ಷದ(ಎಸ್‍ಪಿ) ನಾಯಕ ಅಜಮ್ ಖಾನ್ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.
ಭಾನುವಾರದಂದು ರಾಮ್‍ಪುರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಅಜಮ್ ಖಾನ್ ಅವರು, ಅವರನ್ನು(ಜಯಪ್ರದಾ) ರಾಮ್‍ಪುರಕ್ಕೆ ಕರೆತಂದಿದ್ದು ನಾನು. ಆಗ ನಾನು ಅವರನ್ನು ಯಾರಿಗೂ ಮುಟ್ಟಲು ಬಿಟ್ಟಿರಲಿಲ್ಲ. ಅದಕ್ಕೆ ನೀವೇ ಸಾಕ್ಷಿ. ನಿಮಗೆ ಅವರ ನಿಜವಾದ ಮುಖ ಗೊತ್ತಾಗಲು 17 ವರ್ಷ ಬೇಕಾಯ್ತು. ಆದ್ರೆ ನನಗೆ ಕೇವಲ 17 ದಿನಗಳಲ್ಲಿ ಅವರು ಖಾಕಿ ಬಣ್ಣದ ಒಳ ಉಡುಪು ಹಾಕುತ್ತಾರೆ ಅನ್ನೋದು ಗೊತ್ತಾಯ್ತು ಎಂದು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಹಾಗೂ ಇನ್ನಿತರ ನಾಯಕರ ಮುಂದೆಯೇ ಬಿಜೆಪಿ ನಾಯಕಿಯ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದಾರೆ.

ಅಜಮ್ ಖಾನ್ ಅವರು ಸದ್ಯ ಲೋಕಸಭಾ ಚುನಾವಣೆಗೆ ರಾಮ್‍ಪುರದಿಂದ ಎಸ್‍ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕಿ ಬಗ್ಗೆ ಅಸಂಬದ್ಧವಾಗಿ ಹೇಳಿಕೆ ನೀಡಿರುವುದಕ್ಕೆ ಅಜಮ್ ಖಾನ್ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಲಾಗಿದೆ.
ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಅಜಮ್ ಖಾನ್ ಅವರು, ನಾನು ಬಿಜೆಪಿ ಅಭ್ಯರ್ಥಿ ವಿರುದ್ಧ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಒಂದು ವೇಳೆ ನಾನು ಮಾತನಾಡಿರುವುದು ತಪ್ಪು ಎಂದು ಸಾಬೀತಾದರೆ, ನಾನು ಚುನಾವಣೆಯಿಂದ ಹಿಂದಕ್ಕೆ ಸರಿಯುತ್ತೇನೆ ಎಂದು ತಿಳಿಸಿದರು.

ಜನರ ನಿಜ ಮುಖವನ್ನು ತಿಳಿಯಲು ವರ್ಷಗಟ್ಟಲೇ ಸಮಯ ಬೇಕು ಅನ್ನುವ ಅರ್ಥದಲ್ಲಿ ನಾನು ಮಾತನಾಡಿದ್ದು, ಹಿಂದೊಮ್ಮೆ ಒಬ್ಬ ವ್ಯಕ್ತಿ 150 ಬಂದೂಕನ್ನು ತಂದು ನನ್ನನ್ನು ಕಂಡರೆ ಸಾಯಿಸುತ್ತಾನೆ ಅಂತ ಹೇಳಿದ್ದನು. ಆದ್ರೆ ಬಳಿಕ ಆ ವ್ಯಕ್ತಿ ಆರ್ ಎಸ್‍ಎಸ್ ಪ್ಯಾಂಟ್ ಹಾಕಿದ್ದ. ಅದಕ್ಕೆ ಆ ರೀತಿ ಹೇಳಿದ್ದ ಅನ್ನೊದು ಗೊತ್ತಾಯ್ತು ಎಂದು ಒಂದು ಕಥೆಯನ್ನು ಹೇಳಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನಾನು 9 ಬಾರಿ ರಾಮ್‍ಪುರ ಕ್ಷೇತ್ರದಿಂದ ಎಂಎಲ್‍ಎ ಆಗಿದ್ದೇನೆ. ಮಂತ್ರಿ ಕೂಡ ಆಗಿದ್ದೇನೆ. ಏನು ಹೇಳಬೇಕು ಅನ್ನೋದು ನನಗೆ ಗೊತ್ತಿದೆ. ನಾನು ಯಾರ ಹೆಸರನ್ನು ಹೇಳಿಲ್ಲ. ಹೆಸರು ಹೇಳಿ ಯಾರಿಗೂ ಅವಮಾನ ಮಾಡಿಲ್ಲ. ಒಂದು ವೇಳೆ ನನ್ನ ಹೇಳಿಕೆ ತಪ್ಪೆಂದು ಸಾಬೀತಾದರೆ ನಾನು ಚುನಾವಣೆಯಿಂದ ಹಿಂದಕ್ಕೆ ಸರಿಯುತ್ತೇನೆ ಎಂದರು.
ನನಗೆ ಬೇಸರವಾಗಿದೆ. ಮಾಧ್ಯಮಗಳು ನನ್ನನ್ನು ಇಷ್ಟಪಡಲ್ಲ. ಹಾಗೆಯೇ ನಾನು ಕೂಡ ಮಾಧ್ಯಮಗಳನ್ನು ಇಷ್ಟಪಡಲ್ಲ. ಯಾಕೆಂದರೆ ಮಾಧ್ಯಮಗಳಿಂದ ದೇಶಕ್ಕೆ ಹಾನಿಯಾಗುತ್ತದೆ ಎಂದು ಹೇಳಿ ಪತ್ರಕರ್ತರ ವಿರುದ್ಧವೂ ಕಿಡಿಕಾರಿದರು.

Leave a Reply