ಕೋರ್ಟ್ ಗೆ ಸಾಕ್ಷ್ಯವಾಯ್ತು ವಾಟ್ಸಪ್ ಚರ್ಚೆ- ಐವರು ಅಧಿಕಾರಿಗಳ ವಿರುದ್ಧ ಎಫ್‍ಐಆರ್

ತುಮಕೂರು: ವಾಟ್ಸಪ್ ಗ್ರೂಪಲ್ಲಿ ಚರ್ಚೆಯಾಗುವ ವಿಚಾರ ಕೆಲವೊಮ್ಮೆ ಗ್ರೂಪ್ ಅಡ್ಮಿನ್ ಗೆ ಮುಳುವಾಗತ್ತೆ. ಆದ್ರೆ ಇಲ್ಲೊಂದು ಪ್ರಕರಣದಲ್ಲಿ ವಾಟ್ಸಪ್ ಗ್ರೂಪಲ್ಲಿ ನಡೆದ ಚರ್ಚೆ, ಶೇರ್ ಮಾಡಿದ ವೀಡಿಯೋವನ್ನೇ ಸಾಕ್ಷ್ಯವಾಗಿ ಪರಿಗಣಿಸಿದ ನ್ಯಾಯಾಲಯ ಐದು ಜನ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಅಪರೂಪದ ಆದೇಶ ಹೊರಡಿಸಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಎಮ್.ಎಪ್.ಸಿ ನ್ಯಾಯಾಲಯ ಇಂತಹದೊಂದು ಮಹತ್ವದ ಆದೇಶ ಹೊರಡಿಸಿದೆ. ಚಿಕ್ಕನಾಯಕನಹಳ್ಳಿ ಕೆರೆ ನೀರನ್ನು ದಂಧೆಕೋರರು ಕದ್ದು ಮಾರುತ್ತಿದ್ದರು. ಈ ದಂಧೆಯ ವೀಡಿಯೋ ಸಹಿತ “ಚಿಕ್ಕನಾಯಕನಹಳ್ಳಿ ಅಭಿವೃದ್ದಿಗಾಗಿ” ಎಂಬ ವಾಟ್ಸಪ್ ಗ್ರೂಪ್ ಮೂಲಕ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ನೆಪಮಾತ್ರಕ್ಕೆ ಕೆರೆಗೆ ಭೇಟಿ ಕೊಟ್ಟ ಪುರಸಭೆ ಅಧಿಕಾರಿಗಳು ಕದ್ದುಮಾರುತ್ತಿದ್ದ ನೀರಿನ ಟ್ಯಾಂಕರನ್ನು ಬಿಟ್ಟು, ಕೇವಲ ಪೈಪನ್ನು ವಶಪಡಿಸಿಕೊಂಡು ದಂಧೆಕೋರರ ವಿರುದ್ಧ ಕ್ರಮಕೈಗೊಳ್ಳದೆ ಸುಮ್ಮನಾಗಿದ್ದರು.

ಅಧಿಕಾರಿಗಳ ಈ ನಿರ್ಲಕ್ಷ್ಯತನವನ್ನು ಪ್ರಶ್ನಿಸಿ ಗ್ರೂಪ್ ಅಡ್ಮಿನ್ ಮಲ್ಲಿಕಾರ್ಜುನ್, ಕೋರ್ಟ್ ಮೊರೆ ಹೋಗಿದ್ದರು. ತಾವು ಕ್ರಿಯೆಟ್ ಮಾಡಿದ `ಚಿಕ್ಕನಾಯಕನಹಳ್ಳಿ ಅಭಿವೃದ್ದಿಗಾಗಿ’ ಎಂಬ ಗ್ರೂಪ್ ಲ್ಲಿ ಅಧಿಕಾರಿಗಳೂ ಸದಸ್ಯರಾಗಿದ್ದಾರೆ. ದಂಧೆಕೋರರು ಕೆರೆಯ ನೀರು ಕದ್ದುಮಾರುತ್ತಿರುವ ಎಲ್ಲಾ ಮಾಹಿತಿಯನ್ನು ಅವರಿಗೆ ಕೊಟ್ಟಿದ್ದೇವೆ. ನೀರು ಕಳ್ಳತನ ಆಗುತ್ತಿರುವುದನ್ನು ಗ್ರೂಪ್ ನಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಒಪ್ಪಿಕೊಂಡಿದ್ದಾರೆ. ಆದರೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ವಾಟ್ಸಪ್ ಚರ್ಚೆಯ ಸ್ಕ್ರಿನ್ ಶಾಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ಮನವರಿಕೆ ಮಾಡಿಕೊಟ್ಟಿದ್ದರು.

ಈ ಸಾಕ್ಷ್ಯವನ್ನು ಪರಿಗಣಿಸಿದ ನ್ಯಾಯಾಲಯ ಚಿಕ್ಕನಾಯಕನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮುಖ್ಯಾಧಿಕಾರಿ ಮಂಜುಳಾದೇವಿ, ಪರಿಸರ ಎಂಜಿನಿಯರ್ ಚಂದ್ರಶೇಖರ್, ಪಿಎಸೈ ಮಂಜುನಾಥ್ ಹಾಗೂ ಸಿಪಿಐ ಮಾರಪ್ಪ ಸೇರಿ ಒಟ್ಟು ಐದು ಜನ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ತಿಪಟೂರು ಡಿವೈಎಸ್ ಪಿಗೆ ತಾಕೀತು ಮಾಡಿ ಆದೇಶ ಹೊರಡಿಸಿದೆ. ಇದರಂತೆ ಇದೀಗ ಐವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.

Comments

Leave a Reply

Your email address will not be published. Required fields are marked *