ಪ್ರವಾಸಕ್ಕೆ ಬಂದಿದ್ದ ವಿದೇಶಿ ಯುವತಿ ಹೋಟೆಲ್ ನಲ್ಲಿ ಶವವಾದ್ಳು!

ಚೆನ್ನೈ: ಪ್ರವಾಸಕ್ಕೆಂದು ಸ್ನೇಹಿತನ ಜೊತೆ ಬಂದಿದ್ದ ಫಿನ್ಲೆಂಡ್ ದೇಶದ ಯುವತಿಯೊಬ್ಬಳು ಬುಧವಾರ ಚೆನ್ನೈನ ಹೋಟೆಲ್‍ವೊಂದರಲ್ಲಿ ಶವವಾಗಿದ್ದಾಳೆ.

22 ವರ್ಷದ ಎಮಿಲಿಯಾ ಮೃತ ವಿದೇಶಿ ಯುವತಿ. ಪ್ರವಾಸಕ್ಕೆಂದು ನವೆಂಬರ್ ನಲ್ಲಿ ಭಾರತಕ್ಕೆ ಎಮಿಲಿಯಾ ತನ್ನ ಸ್ನೇಹಿತ ಅಲೆಕ್ಷಿಯಾ ಜೊತೆ ಬಂದಿದ್ದಳು. ಕೊನೆಯದಾಗಿ ಮಂಗಳವಾರ ಕನ್ಯಾಕುಮಾರಿಗೆ ಭೇಟಿ ನೀಡಿ ಚೆನ್ನೈನಲ್ಲಿ ಉಳಿದುಕೊಂಡಿದ್ದರು.

ಹೋಟೆಲ್ ಪರಿಶೀಲಿಸಿ ನೋಡಿದಾಗ ಅತಿಯಾದ ಡ್ರಗ್ಸ್ ಸೇವನೆಯಿಂದ ಎಲಿಮಿಯಾ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಎಲಿಮಿಯಾ ಮತ್ತು ಅಲೆಕ್ಷಿಯ ಇಬ್ಬರು ಬುಧವಾರ ಬೆಳಗ್ಗೆ ಡ್ರಗ್ಸ್ ತೆಗೆದುಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ ಎಲಿಮಿಯಾ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇರುವುದನ್ನು ಗಮನಿಸಿದ ಅಲೆಕ್ಷಿಯಾ ಗಾಬರಿಗೊಂಡು ಹೋಟೆಲ್‍ನ ರಿಸೆಪ್ಷನ್ ಬಳಿ ಬಂದು ವೈದ್ಯಕೀಯ ಸಹಾಯಕರನ್ನು ಕರೆಯುವಂತೆ ಮನವಿ ಮಾಡಿಕೊಂಡಿದ್ದಾನೆ.

ಅಲೆಕ್ಷಿಯಾ ಹೇಳಿದ ತಕ್ಷಣ ಹೋಟೆಲ್ ಸಿಬ್ಬಂದಿ ಎಲಿಮಿಯಾ ಕೊಠಡಿಗೆ ದೌಡಾಯಿಸಿದ್ದಾರೆ. ನಾವು ಮತ್ತು ವೈದ್ಯರು ಕೊಠಡಿ ಪ್ರವೇಶಿಸಿದಾಗ ಎಲಿಮಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಎಲಿಮಿಯಾಳನ್ನು ಪರೀಕ್ಷಿಸಿದ ವೈದ್ಯರು ನಂತರ ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಿದರು. ಈ ವೇಳೆ ಡ್ರಗ್ಸ್ ಸೇವಿಸಿ ಅಸ್ವಸ್ಥಗೊಂಡಿದ್ದ ಅಲೆಕ್ಷಿಯಾನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಿದ್ದಾರೆ.

ಫಿನ್ಲೆಂಡ್ ಯುವತಿಯೊಬ್ಬಳು ಮೃತಪಟ್ಟಿದ್ದು, ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ತನಿಖೆಯನ್ನು ಮಾಡುತ್ತಿದ್ದು, ಆಕೆಯ ಗೆಳೆಯನನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎಲಿಮಿಯಾ ಅತಿಯಾದ ಮದ್ಯ ಸೇವನೆ ಮತ್ತು ಡ್ರಗ್ಸ್ ಸೇವನೆಯಿಂದ ಮೃತಪಟ್ಟಿರಬಹುದು. ಆದರೆ ಮರಣೋತ್ತರ ಪರೀಕ್ಷೆಯ ವರದಿ ಬರುವರೆಗೂ ನಿಖರ ಕಾರಣ ಸ್ಪಷ್ಟವಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *