ಡೋಂಟ್ ವರಿ, ನಿಮ್ಮ ಹಣ ಸೇಫ್ ಆಗಿದೆ- ಯೆಸ್ ಬ್ಯಾಂಕ್ ಠೇವಣಿದಾರರಿಗೆ ಸೀತಾರಾಮನ್ ಅಭಯ

ನವದೆಹಲಿ: ಡೋಂಟ್ ವರಿ, ನಿಮ್ಮ ಹಣ ಸೇಫ್ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯೆಸ್ ಬ್ಯಾಂಕ್ ಠೇವಣಿದಾರರಲ್ಲಿ ಧೈರ್ಯ ತುಂಬಲು ಯತ್ನಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಆರ್‌ಬಿಐ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಯೆಸ್ ಬ್ಯಾಂಕ್‍ನಲ್ಲಿ ಎಸ್‍ಬಿಐ 5 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದು, ಅಲ್ಲಿನ ಉದ್ಯೋಗಿಗಳಿಗೆ ಒಂದು ವರ್ಷ ಯಾವುದೇ ಭಯ ಇರಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನೀಡಿದ ಸಾಲಗಳೇ ಯೆಸ್ ಬ್ಯಾಂಕ್‍ಗೆ ಮುಳುವಾಗಿವೆ. ಯಶ್ ಬ್ಯಾಂಕ್ ಬಿಕ್ಕಟ್ಟು ದಿಢೀರ್ ಸಂಭವಿಸಿದ್ದಲ್ಲ. 2017ರಿಂದಲೇ ಬ್ಯಾಂಕ್ ಮೇಲೆ ನಾವು ನಿಗಾ ಇಟ್ಟಿದ್ದೇವು. ಈ ನಿಟ್ಟಿನಲ್ಲಿ ಆರ್‌ಬಿಐ ಯೆಸ್ ಬ್ಯಾಂಕ್‍ನ ವ್ಯವಸ್ಥಾಪ ನಿರ್ದೇಶಕ ಹಾಗೂ ಸಿಇಒ ಅವರನ್ನು ಬದಲಿಸಲು ಶಿಫಾರಸು ಮಾಡಿತ್ತು. ಅದರಂತೆ 2018ರ ಸೆಪ್ಟೆಂಬರ್ ನಲ್ಲಿ ಹೊಸದಾಗಿ ಸಿಇಒ ಅವರನ್ನು ನೇಮಕ ಮಾಡಲಾಗಿತ್ತು. ಅಂದಿನಿಂದ ಬ್ಯಾಂಕಿನ ಬಿಕ್ಕಟ್ಟು ಸುಧಾರಣಗೆ ಕೆಲಸ ನಡೆದಿತ್ತು ಎಂದು ತಿಳಿಸಿದರು.

ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾತನಾಡಿ, ಆರ್ಥಿಕತೆಯನ್ನು ಕಾಪಾಡುವ ದೃಷ್ಟಿಯಿಂದಲೇ ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಈ ತಿಂಗಳ ಒಳಗೆ ಯೆಸ್ ಬ್ಯಾಂಕ್ ಪುನರುಜ್ಜೀವನಕ್ಕೆ ಯೋಜನೆ ರೂಪಿಸಲಾಗುವುದು. ಗ್ರಾಹಕರು ಆತಂಕ ಪಡುವುದು ಬೇಡ ಎಂದಿದ್ದಾರೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. 2014ರಲ್ಲಿ 15 ಲಕ್ಷ ತೆಗೆದುಕೊಳ್ಳಿ ಎಂದ ಮೋದಿ, 2018ರಲ್ಲಿ ಪಕೋಡಾ ತೆಗೆದುಕೊಳ್ಳಿ ಎಂದಿದೆ. ಇದೀಗ ಬ್ಯಾಂಕ್‍ಗಳನ್ನು ಬಂದ್ ಮಾಡಲು ಚಾವಿ ಲೋ ಎನ್ನುತ್ತಿದೆ ಎಂದು ವ್ಯಂಗ್ಯವಾಡಿದೆ. ಇದು ಯೆಸ್ ಬ್ಯಾಂಕ್ ಅಲ್ಲ ನೋ ಬ್ಯಾಂಕ್.. ಮೋದಿ ಸರ್ಕಾರ ದೇಶದ ಆರ್ಥಿಕ ಸ್ಥಿತಿಯನ್ನು ಹೇಗೆ ಸರ್ವನಾಶ ಮಾಡಿದೆ ಎಂಬುದಕ್ಕೆ ಯೆಸ್ ಬ್ಯಾಂಕ್ ತಾಜಾ ಉದಾಹರಣೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಜೊತೆಗೆ ನಿರ್ಮಲಾ ಸೀತಾರಾಮನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *