ಸದ್ಯದಲ್ಲೇ ರಾಜ್ಯಕ್ಕೆ ಜಿಎಸ್‍ಟಿ ನಷ್ಟ ಪರಿಹಾರ: ನಿರ್ಮಲಾ ಸೀತಾರಾಮನ್ ಭರವಸೆ

ಬೆಂಗಳೂರು: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಮುಂಗಡ ಪತ್ರ 2020-21ರ ಕುರಿತು ದೇಶಾದ್ಯಂತ ಆಯ್ದ ನಗರಗಳಲ್ಲಿ ಉದ್ಯಮಿಗಳ ಜೊತೆ ಸಂವಾದ ಕಾರ್ಯಕ್ರಮದ ನಡೆಸುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಜನಪರ ಮುಂಗಡಪತ್ರ ಕುರಿತಂತೆ ಉದ್ಯಮಿಗಳು ಹಾಗೂ ಆಯ್ದ ಗಣ್ಯರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ನಿರ್ಮಲಾ ಸೀತಾರಾಮನ್, ಶೀಘ್ರದಲ್ಲೇ ರಾಜ್ಯದ ಜಿಎಸ್‍ಟಿ ತೆರಿಗೆ ನಷ್ಟ ಪರಿಹಾರ ಕೊಡುವ ಭರವಸೆ ನೀಡಿದರು.

https://twitter.com/nsitharamanoffc/status/1229359287404658688

ಉದ್ಯಮಿಗಳ ಜೊತೆಗಿನ ಸಂವಾದದ ಬಳಿಕ ಮಾತಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಜಿಎಸ್‍ಟಿ ತೆರಿಗೆ ಬಾಕಿ ಕರ್ನಾಟಕದ ಒಂದೇ ಸಮಸ್ಯೆ ಅಲ್ಲ. ದೇಶದ ಎಲ್ಲ ರಾಜ್ಯಗಳಿಗೂ ಜಿಎಸ್‍ಟಿ ತೆರಿಗೆ ನಷ್ಟ ಪರಿಹಾರ ಕೇಂದ್ರದಿಂದ ಬಾಕಿ ಕೊಡಬೇಕಿದೆ. ಕಳೆದ ವರ್ಷ ಕೇಂದ್ರದ ಬಳಿ ಜಿಎಸ್‍ಟಿ ತೆರಿಗೆ ಬಾಕಿ ಕೊಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷದ ಅಂತ್ಯಕ್ಕೆ ಎರಡು ತಿಂಗಳ ಜಿಎಸ್‍ಟಿ ತೆರಿಗೆ ಬಾಕಿ ಇತ್ತು. ಆ ಜಿಎಸ್‍ಟಿ ತೆರಿಗೆ ಪರಿಹಾರವನ್ನು ಕಳೆದ ಡಿಸೆಂಬರ್ ವೇಳೆಯಲ್ಲಿ ರಾಜ್ಯಕ್ಕೆ ನೀಡಲಾಯ್ತು. ಕೊನೆಯ ತ್ರೈಮಾಸಿಕದ ಬಾಕಿಯನ್ನು ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಮನ್ರೇಗಾ ಯೋಜನೆಯಲ್ಲಿ ರಾಜ್ಯದ ವೇತನ ಬಾಬ್ತು ಬಾಕಿ ಯಾವುದೂ ಇಲ್ಲ ಎಂದ ನಿರ್ಮಲಾ ಸೀತಾರಾಮನ್, 14ನೇ ಹಣಕಾಸು ಆಯೋಗದ ಅನುದಾನವೂ ಸೇರಿದಂತೆ ಇಲ್ಲಿಯವರೆಗೆ ರಾಜ್ಯಕ್ಕೆ 2.03 ಲಕ್ಷ ಕೋಟಿ ರೂ ನಾನಾ ಅನುದಾನಗಳು ನೀಡಲಾಗಿದೆ ಎಂದರು.

ಕೇಂದ್ರದ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಲಾದ ಬೆಂಗಳೂರು ಸಬರ್ಬನ್ ರೈಲ್ವೆ ಯೋಜನೆಯ ಅನುದಾನ ಕುರಿತೂ ವಿತ್ತ ಸಚಿವರು ಮಾತಾಡಿದರು. ಬೆಂಗಳೂರು ಸಬರ್ಬನ್ ಯೋಜನೆಗೆ ಕೇಂದ್ರ ಸರ್ಕಾರ ಶೇಕಡಾ 20 ಹಾಗೂ ರಾಜ್ಯ ಸರ್ಕಾರ ಶೇಕಡಾ 20 ವೆಚ್ಚ ಭರಿಸುತ್ತವೆ. ಉಳಿದ ಶೇಕಡಾ 60 ರಷ್ಟು ವೆಚ್ಚವನ್ನು ಹೊರ ಸಾಲದ ಮೂಲಕ ಹೊಂದಾಣಿಕೆ ಮಾಡಲಾಗುತ್ತದೆ. ಅದಕ್ಕೂ ಕೂಡ ಕೇಂದ್ರ ಸರ್ಕಾರ ಗ್ಯಾರಂಟಿ ಕೊಡಲು ಸಿದ್ಧವಿದೆ. ಮುಂದಿನ ಮಾರ್ಚ್ 31 ರಂದು ಲೋಕಸಭೆಯಲ್ಲಿ ಅನುಮೋದನೆಗೊಂಡ ಬಳಿಕ ಕೇಂದ್ರ ಹಣಕಾಸು ಸಚಿವಾಲಯ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

Comments

Leave a Reply

Your email address will not be published. Required fields are marked *