ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಹೆದರಿ ವ್ಯಕ್ತಿ ನೇಣಿಗೆ ಶರಣು

ಮಂಡ್ಯ: ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಹೆದರಿ ವ್ಯಕ್ತಿಯೊಬ್ಬರು ನೇಣಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ನಡೆದಿದೆ.

ಹೆಮ್ಮನಹಳ್ಳಿ ನಿವಾಸಿ ಪ್ರದೀಪ್(36) ನೇಣಿಗೆ ಶರಣಾದ ವ್ಯಕ್ತಿ. ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವ್ಯವಹಾರ ನಡೆಸಲು ಖಾಸಗಿ ಫೈನಾನ್ಸ್ ಕಂಪನಿಯಿಂದ ಪ್ರದೀಪ್ ಸಾಲ ಪಡೆದಿದ್ದರು. ಆದರೆ ಆತನಿಗೆ ಸರಿಯಾಗಿ ಸಾಲ ಪಾವತಿಸಲು ಆಗುತ್ತಿರಲಿಲ್ಲ. ಈ ನಡುವೆ ಮಂಗಳವಾರ ಪ್ರದೀಪ್ ಪತ್ನಿ ರೇಣುಕಾ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದ್ದರಿಂದ ಪತ್ನಿಯ ಅಂತ್ಯ ಸಂಸ್ಕಾರಕ್ಕಾಗಿ ಪ್ರದೀಪ್ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಪ್ರದೀಪ್ ಗ್ರಾಮಕ್ಕೆ ಬಂದಿರುವ ವಿಷಯ ತಿಳಿದ ಖಾಸಗಿ ಫೈನಾನ್ಸ್ ಕಂಪನಿಯ ನೌಕರರು ಆತನನ್ನು ಕರೆದುಕೊಂಡು ಹೋಗಲು ಬಂದಿದ್ದರು.

ಈ ವೇಳೆ ಪ್ರದೀಪ್ ತಾಯಿ, ನಾದಿನಿಯನ್ನು ಕೂಡ ಕಾರಿನಲ್ಲಿ ಬಲವಂತವಾಗಿ ಎಳೆದುಕೊಂಡು ಹೋಗಲು ಯತ್ನಿಸಿದ್ದರು. ಇದರಿಂದ ಹೆದರಿಕೊಂಡು ಪ್ರದೀಪ್ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಫೈನಾನ್ಸ್ ಕಂಪನಿ ನೌಕರರನ್ನು ಕೆಸ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

Comments

Leave a Reply

Your email address will not be published. Required fields are marked *