ಹಣಕಾಸು ಆಯೋಗದ ಶಿಫಾರಸಿನ ಅನುದಾನವನ್ನು ಕರ್ನಾಟಕಕ್ಕೆ ನೀಡಿ – ಕೇಂದ್ರದ ಮುಂದೆ ರಾಜ್ಯ ಸರ್ಕಾರ ಡಿಮ್ಯಾಂಡ್!

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಪರವಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ 7 ಬೇಡಿಕೆಗಳನ್ನ ಮುಂದಿಟ್ಟಿದೆ. ದೆಹಲಿಯಲ್ಲಿ ನಡೆದ ಕೇಂದ್ರ ಬಜೆಟ್‌ನ ಪೂರ್ವಭಾವಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಭಾಗಿಯಾಗಿದ್ದರು.

ಈ ವೇಳೆ ಕೇಂದ್ರ ಹಣಕಾಸು ಸಚಿವರ ಮುಂದೆ ರಾಜ್ಯದ ಪರವಾಗಿ ಪ್ರಮುಖ 7 ಬೇಡಿಕೆಗಳನ್ನ ಮಂಡಿಸಲಾಗಿದೆ. ಭದ್ರಾ ಮೇಲ್ದಂಡೆ ಅನುದಾನ ಬಿಡುಗಡೆ, ಕರ್ನಾಟಕಕ್ಕೆ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ಅನುದಾನ ಬಿಡುಗಡೆ, ಬೆಂಗಳೂರು ‌ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಕೇಂದ್ರದ ಮುಂದೆ ಬೇಡಿಕೆ ಇಡಲಾಗಿದೆ. ರಾಜ್ಯ ಸರ್ಕಾರ ಕೇಂದ್ರದ ಮುಂದೆ ಇಟ್ಟಿರೋ ಪ್ರಮುಖ ಬೇಡಿಕೆಗಳು ಹೀಗಿವೆ.

ರಾಜ್ಯ ಸರ್ಕಾರದ ಬೇಡಿಕೆಗಳೇನು!?

  • ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಈಗಾಗಲೇ ಘೋಷಿಸಲಾಗಿರುವ 5,300 ಕೋಟಿ ರೂ. ನೆರವನ್ನು ಬಿಡುಗಡೆ ಮಾಡಿ ಮತ್ತು ಅದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ.
  • ಕರ್ನಾಟಕಕ್ಕೆ ಹಣಕಾಸು ಆಯೋಗ ಶಿಫಾರಸು ಮಾಡಿರುವ 11,495 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ.
  • ಸೆಸ್‌ಗಳು ಮತ್ತು ಸರ್‌ಚಾರ್ಜ್‌ಗಳನ್ನು ವಿಭಾಗಿಸಬಹುದಾದ ಪೂಲ್‌ಗೆ ಸೇರಿಸಿ ಇದರಿಂದ ರಾಜ್ಯಗಳು ಕೇಂದ್ರ ತೆರಿಗೆಗಳಲ್ಲಿ ತಮ್ಮ ಸರಿಯಾದ ಪಾಲನ್ನು ಪಡೆಯಬಹುದು.
  • ಬೆಂಗಳೂರು ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಎಸ್ಪಿ ಪ್ಯಾಕೇಜ್ ಅನ್ನು ಘೋಷಿಸಿ.
  • ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರಿಗೆ ಗೌರವಧನವನ್ನು ಹೆಚ್ಚಿಸಿ.
  • ವಸತಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ನೀಡಲಾಗುವ ಭಾರತ ಸರ್ಕಾರದ ಪಾಲನ್ನು ನಗರ ಪ್ರದೇಶದಲ್ಲಿ 1.5 ರಿಂದ 5 ಲಕ್ಷ ರೂ.ಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1.2 ರಿಂದ 3 ಲಕ್ಷ ರೂ.ಗಳಿಗೆ ಹೆಚ್ಚಿಸಿ.
  • ರಾಯಚೂರಿಗೆ AIIMS (ಏಮ್ಸ್‌) ಘೋಷಿಸಿ.