ಮೊದಲ ವಿಕೆಟಿಗೆ ಶತಕದ ಜೊತೆಯಾಟ – ಭಾರತಕ್ಕೆ 185 ರನ್ ಗುರಿ

– ಅಲೀಸಾ ಹೀಲಿ ಸ್ಫೋಟಕ ಬ್ಯಾಟಿಂಗ್
– ಬೆಥ್ ಮೂನಿ ಔಟಾಗದೇ 78 ರನ್

ಮೆಲ್ಬರ್ನ್: ಟಿ20 ವಿಶ್ವಕಪ್ ಕ್ರಿಕೆಟ್ ಫೈನಲಿನಲ್ಲಿ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಮಾಡಿದ್ದು ಭಾರತಕ್ಕೆ 185 ರನ್ ಗಳ ಗುರಿಯನ್ನು ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿಯಾರದ ಅಲೀಸಾ ಹೀಲಿ ಮತ್ತು ಬೆಥ್ ಮೂನಿ ಶತಕದ ಜೊತೆಯಾಟವಾಡಿ ಭರ್ಜರಿ ಜೊತೆಯಾಟವಾಡಿದ ಪರಿಣಾಮ 4 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿದೆ.

ಅಲೀಸಾ ಹೀಲಿ ಮತ್ತು ಬೆಥ್ ಮೂನಿ ಮೊದಲ ವಿಕೆಟಿಗೆ 70 ಎಸೆತಗಳಲ್ಲಿ 115 ರನ್ ಜೊತೆಯಾಟವಾಡಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹೀಲಿ 30 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ಹೀಲಿ 75 ರನ್(39 ಎಸೆತ, 7 ಬೌಂಡರಿ, 5 ಸಿಕ್ಸರ್) ಹೊಡೆದು ಔಟಾದರೆ ನಾಯಕಿ ಮೆಗ್ ಲ್ಯಾನಿಂಗ್ 16 ರನ್ ಗಳಿಸಿದಾಗ ದೀಪ್ತಿ ಶರ್ಮಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾದರು.

ನಂತರ ಬಂದ ಆಶ್ಲೆ ಗಾರ್ಡ್‍ನರ್ 2 ರನ್, ರೇಚಲ್ ಹೇನ್ಸ್ 4 ರನ್ ಗಳಿಸಿ ಔಟಾದರು. ಒಂದು ಕಡೆ ವಿಕೆಟ್ ಉರುಳಿದರೂ ಗಟ್ಟಿ ನಿಂತು ಆಟವಾಡಿದ ಬೆಥ್ ಮೂನಿ ಔಟಾಗದೇ 78 ರನ್(54 ಎಸೆತ, 10 ಬೌಂಡರಿ) ಹೊಡೆದು ರನ್ ಏರಿಸಲು ಸಹಾಯ ಮಾಡಿದರು.

ಒಂದು ಹಂತದಲ್ಲಿ 16 ಓವರ್ ಗಳಲ್ಲಿ 154 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ 22 ರನ್ ಗಳಿಸುವಷ್ಟರಲ್ಲಿ ಅಮೂಲ್ಯವಾದ 3 ವಿಕೆಟ್ ಕಳೆದುಕೊಂಡಿತ್ತು.

ಇತರೇ ರೂಪದಲ್ಲಿ 4 ರನ್(ಬೈ1, ನೋಬಾಲ್ 1, ವೈಡ್ 2) ಬಂದರೂ ಬೌಲರ್ ಗಳು ದುಬಾರಿ ರನ್ ಬಿಟ್ಟುಕೊಟ್ಟರು. ಶಿಖಾ ಪಾಂಡೆ 4 ಓವರ್ ಎಸೆದು 52 ರನ್ ನೀಡಿದರೆ ದೀಪ್ತಿ ಶರ್ಮಾ 38 ರನ್ ನೀಡಿದರು. ರಾಜೇಶ್ವರಿ ಗಾಯಕ್ವಾಡ್ 29 ರನ್, ಪೂನಂ ಯಾದವ್ 30, ರಾಧಾ ಯಾದವ್ 34 ರನ್ ನೀಡಿದರು. ದೀಪ್ತಿ ಶರ್ಮಾ 2 ವಿಕೆಟ್ ಕಿತ್ತರೆ, ಪೂನಂ ಯಾದವ್ ಮತ್ತು ರಾಧಾ ಯಾದವ್ ತಲಾ 1 ವಿಕೆಟ್ ಪಡೆದರು.

Comments

Leave a Reply

Your email address will not be published. Required fields are marked *