ಸೀಜರ್ ಸಿನೆಮಾದ ತಂತ್ರಜ್ಞರು ಹೇಳೋದೇನು ಗೊತ್ತಾ..?

ಬೆಂಗಳೂರು: ಚಿತ್ರದ ಪತ್ರಿಕಾಗೋಷ್ಠಿ ಎಂದರೆ ನಾಯಕ, ನಾಯಕಿ, ಸಹಕಲಾವಿದರು, ತಂತ್ರಜ್ಞರು ಇರುವುದು ವಾಡಿಕೆಯಾಗಿದೆ. ಇದೇ ಮೊದಲ ಬಾರಿ ಎನ್ನುವಂತೆ ತೆರೆ ಹಿಂದೆ ಕೆಲಸ ಮಾಡಿದವರನ್ನು ಪರಿಚಯಿಸುವ ಸಲುವಾಗಿ ‘ಸೀಜರ್’ ಸಿನಿಮಾ ತಂಡವು ಮಾಧ್ಯಮದ ಮುಂದೆ ಹಾಜರಾಗಿತ್ತು. ಮಾರ್ಚ್ 29ರಂದು ಸೀಜರ್ ತೆರೆಗೆ ಬರಲಿದೆ.

ಮೊದಲ ಸರದಿಯಲ್ಲಿ ಮಾತನಾಡಿದ ಚಂದನ್ ಶೆಟ್ಟಿ, ಬಿಗ್ ಬಾಸ್ ನಂತರ ತಮ್ಮನ್ನು ಭೇಟಿ ಮಾಡುತ್ತಿರುವುದು ಖುಷಿ ತಂದಿದೆ. ನಾಲ್ಕು ವರ್ಷದ ಹಿಂದೆ ಏನೂ ಇಲ್ಲದ ಸಂದರ್ಭದಲ್ಲಿ ಸಂಗೀತ ಒದಗಿಸಲು ನಿರ್ದೇಶಕರು ಅವಕಾಶ ಮಾಡಿಕೊಟ್ಟರು. ಮೂರು ಹಾಡುಗಳಿಗೆ ಸಾಹಿತ್ಯ ಬರೆಯಲಾಗಿದೆ. ಒಂದನ್ನು ಚೇತನ್ ಕುಮಾರ್ ಬರೆದಿದ್ದಾರೆ. ಎಲ್ಲಾ ಗೀತೆಗಳಿಗೆ ಧ್ವನಿಯಾಗಿದ್ದೇನೆ. ಅಂದು ಟ್ಯೂನ್ ಮಾಡಿದ್ದರೂ ಇಂದಿನ ಟ್ರೆಂಡ್ ಗೆ ಸೂಟ್ ಆಗುವ ಹಾಗೆ ಸಂಯೋಜನೆ ಮಾಡಲಾಗಿದೆ. ರ‍್ಯಾಪ್ ಗೆ ಸೀಮಿತವಾಗಿದ್ದ ನಾನು ಮೆಲೋಡಿ ಹಾಡು ನೀಡಬಲ್ಲೆ ಎಂಬುದನ್ನು ಇದರಲ್ಲಿ ಸಾಬೀತುಪಡಿಸಿದ್ದೇನೆ. ಮಾಸ್ ಸಿನಿಮಾ, ರವಿಚಂದ್ರನ್, ಚಿರಂಜೀವಿ ಸರ್ಜಾ ಇರುವುದರಿಂದ ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಸ್ಕೋಪ್ ನೀಡಲಾಗಿದೆ ಎಂದರು.

ಚಿತ್ರಕ್ಕೆ ಪ್ರಾರಂಭದಲ್ಲಿ ಚಂದನ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಧೈರ್ಯ ಮಾಡಿ ಅವರಿಂದಲೇ ಕೆಲಸ ಮಾಡಿದ್ದಕ್ಕೆ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಚಿತ್ರ ಹಣಕಾಸು ವ್ಯವಹಾರ, ಕಾರು ಕುರಿತ ಕತೆಯಾಗಿದೆ. ನಿರ್ಮಾಪಕರುಗಳಿಗೆ ಚಿತ್ರ ತೋರಿಸಿದಾಗ ಕತೆಯು ಎಲ್ಲಾ ಭಾಗಕ್ಕೂ ಅನ್ವಯವಾಗುವುದರಿಂದ ತಮಿಳು, ತೆಲುಗು, ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲು ಸಲಹೆ ನೀಡಿದ್ದಾರೆ. ಅದರಂತೆ ಕನ್ನಡದಲ್ಲಿ ಬಿಡುಗಡೆಯಾದ ನಂತರದ ದಿನಗಳಲ್ಲಿ ಅಲ್ಲಿನ ಜನರಿಗೆ ತೋರಿಸುವ ಬಗ್ಗೆ ಯೋಜನೆ ಹಾಕಿಕೊಂಡಿದ್ದೇವೆ ಎಂದು ನಿರ್ದೇಶಕ ವಿನಯ್‍ಕೃಷ್ಣ ಹೇಳಿದರು.

ಕೈಗಾರಿಕೋದ್ಯಮಿಯಾದ ನನಗೆ ಸಿನಿಮಾ ಮಾಡುವ ಬಯಕೆ ಇತ್ತು. ಒಳ್ಳೆ ಚಿತ್ರ ಕೊಡಬೇಕೆನ್ನುವ ಧ್ಯೇಯದಿಂದ, ಕಾರು ಕತೆ ಚೆನ್ನಾಗಿರುವ ಕಾರಣ ಇದಕ್ಕೆ ಹಣ ಹೂಡಿದ್ದೇನೆ ಎನ್ನುತ್ತಾರೆ ನಿರ್ಮಾಪಕ ತ್ರಿವಿಕ್ರಂ ಸಾಪಲ್ಯ. ಪ್ರಾರಂಭದಲ್ಲಿ ಚಿಕ್ಕ ಚಿತ್ರವೆಂದು ಕೊಂಡಿದ್ದ ನಮಗೆ ಕಾಲ ಕಳೆದಂತೆ ಎಲ್ಲವು ದೊಡ್ಡದಾಗುತ್ತಾ ಹೋಗಿದೆ. ಇದರಲ್ಲಿ ನನ್ನದು ಅಳಿಲು ಸೇವೆ ಅಂತ ಬಣ್ಣಿಸಿಕೊಂಡರು ಸಂಭಾಷಣೆಗಾರ ಶ್ರೀಕಾಂತ್. ಸಂಕಲನಕಾರ ಶ್ರೀಕಾಂತ್, ಛಾಯಗ್ರಾಹಕ ರಾಜೇಶ್‍ಕಟ್ಟ ಉಪಸ್ಥಿತರಿದ್ದು ತಮ್ಮ ಅನುಭವ ಹಂಚಿಕೊಂಡರು.

Comments

Leave a Reply

Your email address will not be published. Required fields are marked *