ಕಬಡ್ಡಿ ನೋಡಲು 2ನೇ ಪತ್ನಿಯೊಂದಿಗೆ ಬಂದ ಬಿಜೆಪಿ ಶಾಸಕ – ಪಂದ್ಯಕ್ಕಿಂತ ಮೊದಲೇ ಶುರುವಾಯ್ತು ಪತ್ನಿಯರಿಬ್ಬರ ಕಬಡ್ಡಿ!

ಮುಂಬೈ: ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದ ವೇಳೆ ಬಿಜೆಪಿ ಶಾಸಕನ ಇಬ್ಬರು ಪತ್ನಿಯರು ಪರಸ್ಪರ ಹೊಡೆದಾಡಿದ ಘಟನೆ ಮಹಾರಾಷ್ಟ್ರದ ಯವತಮಾಲದಲ್ಲಿ ನಡೆದಿದೆ. ಈ ವೇಳೆ ಎದುರಾದ ಸವತಿಯರು ಸಾರ್ವಜನಿಕವಾಗಿ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗಳವಾರ ರಾತ್ರಿ ಶಾಸಕ ರಾಜು ತೋಡ್ಸಮಾ ತಮ್ಮ ಎರಡನೇ ಪತ್ನಿ ಪ್ರಿಯಾ ಶಿಂಧೆ ಜೊತೆ ಕಬಡ್ಡಿ ಪಂದ್ಯಾವಳಿಯ ಉದ್ಘಾಟನೆಗೆ ಆಗಮಿಸಿದ್ದರು. ಇದೇ ಕಾರ್ಯಕ್ರಮಕ್ಕೆ ಶಾಸಕರ ಮೊದಲ ಪತ್ನಿ ತಮ್ಮ ಕೆಲ ಬೆಂಬಲಿಗರೊಂದಿಗೆ ಆಗಮಿಸಿದ್ದರು. ಶಾಸಕರ ಪತ್ನಿಯರಿಬ್ಬರು ಎದುರಾಗುತ್ತಿದ್ದಂತೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭಗೊಂಡಿದೆ. ಕೆಲವೇ ಕ್ಷಣಗಳಲ್ಲಿ ಪತ್ನಿಯರು ಪರಸ್ಪರ ಹಲ್ಲೆಗೆ ಮುಂದಾಗುತ್ತಿದ್ದಂತೆ ಬೆಂಬಲಿಗರು ಹೊಡೆದಾಡಿಕೊಂಡಿದ್ದಾರೆ. ಈ ಎಲ್ಲ ಘಟನೆ ಶಾಸಕರ ಎದುರೇ ನಡೆದ್ರೂ ಯಾವುದೇ ಹೇಳಿಕೆಯನ್ನು ನೀಡದೇ ಹಿಂದಿರುಗಿದ್ದಾರೆ.

ಪ್ರಿಯಾ ಶಿಂಧೆ ಸಹಾಯಕ್ಕೆ ಮೊರೆ ಇಟ್ಟರು ಯಾರು ಮುಂದಾಗಿಲ್ಲ. ಮೊದಲ ಪತ್ನಿ ತಮ್ಮ ಸವತಿಯ ಕೂದಲು ಹಿಡಿದು ಸಾರ್ವಜನಿಕ ಸಮಾರಂಭ ಅಂತ ನೋಡದೆಯೂ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕವಾಗಿ ಹೊಡೆದಾಡಿಕೊಂಡ ಹಿನ್ನೆಲೆಯಲ್ಲಿ ಶಾಸಕರ ಪತ್ನಿಯರಿಬ್ಬರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಮೊದಲ ಪತ್ನಿಯಿಂದ ದೂರ ಉಳಿದುಕೊಂಡಿರುವ ಶಾಸಕ ರಾಜು ತೋಡ್ಸಮಾ, ಇತ್ತೀಚೆಗೆ ಸಾರ್ವಜನಿಕ ಸಮಾರಂಭದಲ್ಲಿ ಪ್ರಿಯಾ ಶಿಂಧೆ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ರಾಜು ತೋಡ್ಸಮಾ ಎರಡನೇ ಪತ್ನಿಯೊಂದಿಗೆ ಸಾರ್ವಜನಿಕ ಸಮಾರಂಭದಲ್ಲಿ ಡ್ಯಾನ್ಸ್ ಮಾಡುವ ಮೂಲಕ ಸುದ್ದಿಯಾಗಿದ್ದರು.

Comments

Leave a Reply

Your email address will not be published. Required fields are marked *