ಒಂದೇ ಕೊಠಡಿಯಲ್ಲಿ ವೈದ್ಯಾಧಿಕಾರಿಗಳಿಬ್ಬರ ಪೈಪೋಟಿ – ಸಿಬ್ಬಂದಿಗೆ ಗೊಂದಲ, ರೋಗಿಗಳು ಪರದಾಟ

ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿರುವ ಕೆ.ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹುದ್ದೆಗೆ ಇಬ್ಬರು ವೈದ್ಯರುಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು, ಒಂದೇ ಕೊಠಡಿಯಲ್ಲಿ ಇಬ್ಬರು ತಾವೇ ವೈದ್ಯಾಧಿಕಾರಿ ಎಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಸಿಬ್ಬಂದಿಗೆ ಗೊಂದಲವನ್ನುಂಟು ಮಾಡಿದೆ.

ಡಾ.ಶಶಿಕಲಾ ಮತ್ತು ಡಾ.ಮುರುಳಿ ಇಬ್ಬರು ವೈದ್ಯರು ತಾವೇ ವೈದ್ಯಾಧಿಕಾರಿ ಎಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ.ಶಶಿಕಲಾ ಅವರ ಸ್ಥಾನಕ್ಕೆ ವೈದ್ಯಾಧಿಕಾರಿಯಾಗಿ ಡಾ. ಮುರುಳಿ ಕೃಷ್ಣ ಪಿ.ವಿ ಅವರನ್ನು ಆರೋಗ್ಯ ಇಲಾಖೆ ನೇಮಿಸಿದ್ದು, ಇದೀಗ ಇಬ್ಬರ ನಡುವಿನ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಡಾ. ಶಶಿಕಲಾ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ವೈದ್ಯಾಧಿಕಾರಿಗಳ ಪ್ರಭಾರ ಹುದ್ದೆಯನ್ನು ಮುರುಳಿ ಕೃಷ್ಣರಿಗೆ ವಹಿಸಿಕೊಡಲಾಗಿತ್ತು. ಅದರಂತೆ ಅವರು ಪ್ರಭಾರ ವೈದ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯ ಏಕಾಏಕಿ ನಿರ್ಧಾರದ ವಿರುದ್ಧ ಡಾ. ಶಶಿಕಲಾ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮೊರೆ ಹೋಗಿದ್ದಾರೆ.

ನಾನು ಸೀನಿಯರ್ ಆಗಿದ್ದು, ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದೇನೆ ಅಲ್ಲಿನ ತೀರ್ಪು ಹೊರ ಬರುವವರೆಗೂ ನಾನೇ ಆಡಳಿತ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಯಾರಿಗೂ ಅಧಿಕಾರ ಹಸ್ತಾಂತರಿಸುವುದಿಲ್ಲ ಎಂದು ಡಾ.ಶಶಿಕಲಾ ಪಟ್ಟು ಹಿಡಿದಿದ್ದಾರೆ. ಇತ್ತ ಹಿರಿಯ ಅಧಿಕಾರಿಗಳ ಆದೇಶದಂತೆ ಮುಖ್ಯ ವೈದ್ಯಾಧಿಕಾರಿ ಹುದ್ದೆಯ ಪ್ರಭಾರ ವಹಿಸಿಕೊಂಡಿದ್ದೇನೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಡಾ. ಶಶಿಕಲಾ, ಓಪಿಡಿ ಕೊಠಡಿ ಸಂಖ್ಯೆ ನಾಲ್ಕರಲ್ಲಿ ರೋಗಿಗಳನ್ನು ಪರೀಕ್ಷಿಸುವಂತೆ ಆದೇಶಿಸಲಾಗಿದ್ದು, ಅವರು ಅದನ್ನು ಪಾಲನೆ ಮಾಡಬೇಕು ಎಂದು ಡಾ. ಮುರುಳಿ ಕೃಷ್ಣ ಹೇಳುತ್ತಿದ್ದಾರೆ.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹುದ್ದೆಗೆ ಇಬ್ಬರು ಪೈಪೋಟಿಗೆ ಬಿದ್ದಿದ್ದು, ಆಸ್ಪತ್ರೆಯ ಸಿಬ್ಬಂದಿ ಗೊಂದಲಕ್ಕೊಳಗಾಗಿ ಯಾವ ಅಧಿಕಾರಿಯ ಸೂಚನೆ ಪಾಲಿಸಬೇಕು ಎಂಬ ವಿಚಾರವಾಗಿ ದಿಕ್ಕು ತೋಚದಂತಾಗಿದ್ದಾರೆ. ಇತ್ತ ರೋಗಿಗಳು ಕೂಡ ಇಬ್ಬರ ಜಗಳದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *