ಕಾಂಗ್ರೆಸ್‍ನಲ್ಲಿ ಹಾಲಿ ವರ್ಸಸ್ ಮಾಜಿ ಸಚಿವರ ನಡುವೆ ಫುಲ್ ಫೈಟ್!

ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದಿದೆ. ಮೊದಲ ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ತಪ್ಪಿದ ನಾಯಕರ ಅಸಮಾಧಾನವು ಮೇಲ್ನೋಟಕ್ಕೆ ಕಡಿಮೆಯಾದಂತೆ ಕಾಣುತ್ತಿದೆ. ಆದರೆ ಕಾಂಗ್ರೆಸ್ಸಿನಲ್ಲಿ ಮಾತ್ರ ಹಾಲಿ ವರ್ಸಸ್ ಮಾಜಿ ಸಚಿವರ ನಡುವೆ ಫುಲ್ ಫೈಟ್ ಜೋರಾಗಿದೆ.

ಕಾಂಗ್ರೆಸ್ ಮುಸ್ಲಿಂ ನಾಯಕರ ನಡುವೆ ಶೀತಲ ಸಮರ ಮುಂದುವರಿದಿದ್ದು, ಯಾವುದೇ ಕಾರಣಕ್ಕೂ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬಾರದೆಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಪಟ್ಟು ಹಿಡಿದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

 

ಶುಕ್ರವಾರ ಆಹಾರ ಇಲಾಖೆಯ ಸಮಾವೇಶ ನೆಪದಲ್ಲಿ ದೆಹಲಿ ತೆರಳಿ ಜಮೀರ್ ಅಹ್ಮದ್ ಹೈಕಮಾಂಡ್ ಮುಸ್ಲಿಂ ನಾಯಕರೊಂದಿಗೆ ಚರ್ಚಿಸಿ, ರೋಷನ್ ಬೇಗ್ ಸಂಪುಟ ಸೇರದಂತೆ ತಂತ್ರ ರಚಿಸಿದ್ದಾರೆ. ಒಂದು ವೇಳೆ ಎರಡನೇ ಬಾರಿಯ ಸಂಪುಟ ರಚನೆಯಲ್ಲಿ ಮತ್ತೋರ್ವ ಮುಸ್ಲಿಂ ನಾಯಕರಿಗೆ ಸ್ಥಾನ ನೀಡುವುದಿದ್ದರೆ ಬೀದರ್ ಶಾಸಕ ರಹೀಂ ಖಾನ್ ಗೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರಂತೆ. ಹಾಗಾದ್ರೆ ಸಂಪುಟ ವಿಸ್ತರಣೆಯಲ್ಲಿ ರೋಷನ್ ಬೇಗ್ ಸಚಿವ ಸ್ಥಾನ ಸಿಗುತ್ತಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಯಾಕೆ ಈ ರಣತಂತ್ರ: ಹಜ್ ಖಾತೆ ಅನ್ನುವುದು ಯಾತ್ರಿಕರನ್ನು ಕಳುಹಿಸಿ ಕೊಡುವುದು. ಕೆಲವು ಮುಸ್ಲಿಂ ಸಮುದಾಯದ ದುರ್ಬಲ ವರ್ಗದವರಿಗೆ ನೆರವಾಗುತ್ತದೆ. ಈ ಖಾತೆಯ ಮೂಲಕ ಜಮೀರ್ ಸಮುದಾಯ ಲಾಭ ಪಡೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಜಮೀರ್ ಬಳಿ ಈ ಖಾತೆ ಇರುವುದು ಬೇಡ ಎಂದು ರೋಷನ್ ಬೇಗ್ ಪಟ್ಟು ಹಿಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಡಿಸಿಎಂ ಪರಮೇಶ್ವರ್ ಮತ್ತು ಸಚಿವ ಯು.ಟಿ.ಖಾದರ್ ಜೊತೆ ರೋಷನ್ ಬೇಗ್ ಮಾತನಾಡಿ ಹಜ್ ಖಾತೆಯನ್ನು ಜಮೀರ್ ಅವರಿಂದ ಹಿಂಪಡೆದು ಬೇರೆ ಯಾರಿಗಾದ್ರೂ ನೀಡಿ ನಮ್ಮ ಅಭ್ಯಂತರವಿಲ್ಲ ಅಂತಾ ಹೇಳಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.

Comments

Leave a Reply

Your email address will not be published. Required fields are marked *